ಲಗ್ನ ಪತ್ರಿಕೆಯಲ್ಲಿ ರೈತ ಪರ ಘೋಷಣೆ, ರೈತ ಮುಖಂಡರ ಫೋಟೊ ಮುದ್ರಣ !!

ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನವನ್ನು ಬೆಂಬಲಿಸಲು ಹರಿಯಾಣ ರೈತರು ನೂತನ ಮಾರ್ಗವೊಂದನ್ನು ಕಂಡುಕೊಂಡಿದ್ದು, ಮದುವೆಯ ಆಮಂತ್ರಣಗಳಲ್ಲಿ ರೈತ ಹೋರಾಟ ಪರ ಘೋಷಣೆಗಳು ಹಾಗೂ ಹೋರಾಟಗಾರರ ಫೋಟೊಗಳನ್ನು ಮುದ್ರಿಸುತ್ತಿದ್ದಾರೆ.
“ರೈತರಿಲ್ಲದೇ ಅನ್ನವಿಲ್ಲʼ, “ರೈತರ ಹೋರಾಟಕ್ಕೆ ಜಯವಾಗಲಿʼ, “ರೈತರ ಬೇಡಿಕೆಗಳು ಈಡೇರಲಿ” ಸೇರಿದಂತೆ ವಿವಿಧ ಘೋಷಣೆಗಳನ್ನು ಮುದ್ರಿಸುತ್ತಿದ್ದಾರೆ. ಅಲ್ಲದೇ ರೈತ ಮುಖಂಡ ಸರ್‌ ಛೋಟುರಾಮ್‌ ಅವರ ಫೋಟೊಗಳನ್ನು ಲಗ್ನ ಪತ್ರಿಕೆಗಳಲ್ಲಿ ಮುದ್ರಿಸುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ರ ಭಾವಚಿತ್ರಗಳನ್ನು ಕೂಡ ಮದುವೆ ಆಮಂತ್ರಣಗಳಲ್ಲಿ ಮುದ್ರಿಸುವಂತೆ ಬೇಡಿಕೆ ಬರುತ್ತಿದೆ ಎಂದು ಕೈತಾಲ್‌ನ ಮುದ್ರಣಾಲಯದ ಮಾಲಕರೊಬ್ಬರು ತಿಳಿಸಿದ್ದಾರೆ.
೧೮೮೧ರಲ್ಲಿ ಜನಿಸಿದ ಸರ್‌ ಛೋಟುರಾಮ್‌ ಅವರನ್ನು ರೈತರ ಪಾಲಿನ ದಂತಕತೆ ಎಂದೇ ಪರಿಗಣಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಸಬಲೀಕರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
ಸಾವಿರಾರು ರೈತರು ಈ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಮತ್ತು ನಾವು ಅವರೊಂದಿಗೆ ಹೋರಾಟದ ಭಾಗವಾಗಲು ಬಯಸುತ್ತೇವೆ. ನನ್ನ ಮಗ ಮದುವೆಯಾಗುತ್ತಿದ್ದಾನೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸರ್‌ ಛೋಟುರಾಮ್‌ ಮತ್ತು ಶಹೀದ್ ಭಗತ್ ಸಿಂಗ್ ಅವರ ಚಿತ್ರಗಳನ್ನು ಮುದ್ರಿಸಿ ಹೋರಾಟವನ್ನು ಬೆಂಬಲಿಸುತ್ತಿದ್ದೇನೆ. ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ಕಾನೂನುಗಳನ್ನು ರದ್ದುಗೊಳಿಸುವ ಅವರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ದುಂದ್ರೇಹಿ ಗ್ರಾಮದ ರೈತ ಪ್ರೇಮ್‌ ಸಿಂಗ್‌ ಗೋಯಾತ್‌ ಹೇಳುತ್ತಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement