ಮಾರ್ಚ್ 24 ರಿಂದ ಬೆಂಗಳೂರು ಚಲನಚಿತ್ರೋತ್ಸವ

ಬೆಂಗಳೂರು: ೧೩ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 24ರಿಂದ 31 ರವರೆಗೆ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಈ ಬಾರಿ “ಭಾರತೀಯ ಪ್ರದರ್ಶನ ಕಲೆಗಳ ಮಹತ್ವ” ವಿಷಯದ ಮೇಲೆ ಚಿತ್ರೋತ್ಸವವನ್ನು ಏರ್ಪಡಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ವಿಷಯ ತಿಳಿಸಿದ್ದಾರೆ.
ಕೋವಿಡ್ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳಿಗನುಸಾರವಾಗಿ ಈ ಚಿತ್ರೋತ್ಸವ ನಡೆಯಬೇಕೆಂದು ಅವರು ಸೂಚಿಸಿದರು.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯನ್ ಮಾಲ್‍ನ ಪಿವಿಆರ್ ಚಿತ್ರಮಂದಿರದ 11 ಪರದೆಗಳಲ್ಲಿ ಒಟ್ಟಾರೆ 50ಕ್ಕೂ ಹೆಚ್ಚು ದೇಶಗಳ ಸುಮಾರು 200 ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಏಳು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವದಲ್ಲಿ ಏಷಿಯನ್ ಸಿನಿಮಾ, ಚಿತ್ರಭಾರತಿ ಹಾಗೂ ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗವಿರುತ್ತದೆ. ಅಲ್ಲದೆ, ವಿಶ್ವಸಿನಿಮಾ, ಸಿಂಹಾವಲೋಕನ, ಗ್ರ್ಯಾಂಡ್ ಕ್ಲಾಸಿಕ್, ಕೆಲವು ದೇಶಗಳ ವಿಶೇಷ ಸಿನಿಮಾ, ಅಗಲಿದ ವಿಶ್ವದ, ಭಾರತದ ಮತ್ತು ಕನ್ನಡ ಚಿತ್ರರಂಗದ ಗಣ್ಯರ ಸಂಸ್ಮರಣೆ, ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ವಿಭಾಗ, ನೆಟ್‍ಪ್ಯಾಕ್, ಜೀವನಚರಿತ್ರೆ ಆಧರಿಸಿದ ಚಿತ್ರಗಳ ವಿಭಾಗಗಳು ವಿವಿಧ ದೃಷ್ಟಿಕೋನವನ್ನು ಬಿಂಬಿಸಲಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 13ನೇ ಆವೃತ್ತಿಯ ಲಾಂಛನವನ್ನು ಬಿಡುಗಡೆ ಮಾಡಿದರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement