ರಾಜ್ಯದಲ್ಲಿ ಪಿಎಫ್‌ಐ-ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಲಿಂಬಾವಳಿ ಒತ್ತಾಯ

ಬೆಂಗಳೂರು: ಡಿಜೆ-ಕೆಜಿಹಳ್ಳಿ ಗಲಭೆ ಮತ್ತು ಸಂಘರ್ಷಕ್ಕೆ ಕಾರಣಕರ್ತ ಸಂಘಟನೆಗಳಾದ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಪಿಎಫ್‍ಐ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ರಾಜ್ಯ ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ.
ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದಆಗಸ್ಟ್ 11 ರಂದು ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟೀಯ ತನಿಖಾ ಸಂಸ್ಥೆ (ಎನ್ಐಎ) 2021ರ ಫೆಬ್ರವರಿ 10 ರಂದು ನ್ಯಾಯಲಯಕ್ಕೆ 7 ಸಾವಿರ ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದೆ. ಗಲಭೆಯಲ್ಲಿ ಇದುವರೆಗೆ 247 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಈ ಪೈಕಿ ಎಸ್‍ಡಿಪಿಐಗೆ ಸೇರಿದ 40ಕ್ಕೂ ಅಧಿಕ ಗಲಭೆಕೋರರು ಇರುವುದಾಗಿ ತಿಳಿಸಿದೆ. ಈ ಎರಡು ಸಂಘಟನೆಗಳು ನಿರಂತರವಾಗಿ ದೇಶದ್ರೋಹಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವುಗಳನ್ನು ರಾಜ್ಯ ಸರ್ಕಾರ ತಕ್ಷಣವೇ ನಿಷೇಧಿಸಬೇಕು ಎಂದರು.
ಶಾಸಕರ ಮನೆಗೆ ಬೆಂಕಿ, ನೂರಾರು ವಾಹನಗಳಿಗೆ ಬೆಂಕಿ ಹಾಕಿದ ತಂಡವು ಇದಕ್ಕಾಗಿ ಪೂರ್ವತಯಾರಿ ನಡೆಸಿತ್ತು. ಆ ದಿನ ಮಧ್ಯಾಹ್ನ ವಿವಾದಾತ್ಮಕ ವಿಡಿಯೋವನ್ನು ಫೈರೋಜ್ ಪಾಷಾ ಅಪ್‍ಲೋಡ್ ಮಾಡಿದ್ದು, ಅವಾಚ್ಯ ಶಬ್ದಗಳಿಂದ ಕಾಮೆಂಟ್ ಬರೆದು ಅದನ್ನು ಪುಲಕೇಶಿನಗರದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರ ಸಂಬಂಧಿ ನವೀನ್‍ಗೆ ಟ್ಯಾಗ್ ಮಾಡಿದ್ದ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ನವೀನ್, ವಿವಾದಾತ್ಮಕ ಕಾರ್ಟೂನನ್ನು ಪೋಸ್ಟ್ ಮಾಡಿದ್ದು, ಇದನ್ನು ನೆಪವನ್ನಾಗಿ ಮಾಡಿ ಗಲಭೆ ನಡೆಸಲಾಗಿದೆ.ಇದು ಎನ್‍ಐಎ ವರದಿಯಲ್ಲಿ ಸ್ಪಷ್ಟಗೊಂಡಿದೆ ಎಂದರು.
ಸಿದ್ದರಾಮಯ್ಯ 2015ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಪಿಎಫ್‍ಐ ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‍ಡಿ) ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಇದ್ದ 1,600ಕ್ಕೂ ಹೆಚ್ಚು ಪ್ರಕರಣಗಳನ್ನು ರದ್ದು ಮಾಡಿದ್ದಾರೆ. ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಚ್ಚಿದ ಕುರಿತು ಸದನದಲ್ಲಿ ಚರ್ಚೆ ಮಾಡಲು ಕಾಂಗ್ರೆಸ್ ಶಾಸಕರು ಸಿದ್ಧರಿರಲಿಲ್ಲ. ಇಷ್ಟಾಗಿಯೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪಿಎಫ್‍ಐ, ಎಸ್‍ಡಿಪಿಐಗಳು ಬಿಜೆಪಿಯ ಬಿ ಟೀಂ ಎಂದಿರುವುದು ಎಷ್ರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಸಂಘಟನೆಗಳ ಕಾರ್ಯಕರ್ತರು ನಿನ್ನೆ ಕೇರಳದ ಆಲಪ್ಪುಜ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂದೇವಕ ಸಂಘದ ಕಾರ್ಯಕರ್ತರಾದ ನಂದಕೃಷ್ಣ ಅವರನ್ನು ಕೊಲೆ ಮಾಡಿದ್ದನ್ನೂ ಅವರು ಉಲ್ಲೇಖಿಸಿದ ಅವರು, ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ನಡೆದ ಮಂಗಳೂರು ಗಲಭೆಯ ಹಿಂದೆಯೂ ಈ ಸಂಘಟನೆಗಳು ಇದ್ದ ಬಗ್ಗೆ ಸಂಶಯ ಇದೆ. ಈಚೆಗೆ ನಡೆದ ಪಂಚಾಯತ್ ಚುನಾವಣೆ ಮತ ಎಣಿಕೆ ವೇಳೆ ಕೆಲವು ಎಸ್‍ಡಿಪಿಐ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು, ಇಂಥ ಸಂಘಟನೆಗಳನ್ನು ನಿಷೇಧಿಸುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಿದ್ದರಾಜು, ರಾಜ್ಯ ಎಸ್. ಸಿ. ಮೋರ್ಚಾ ಅಧ್ಯಕ್ಷರಾದ ಚಲವಾದಿ ನಾರಾಯಣಸ್ವಾಮಿ ಮೊದಲದವರಿದ್ದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement