ಕಂದಕಕ್ಕೆ ಉರುಳಿದ ಕಾಂಕ್ರೀಟ್ ಲಾರಿ: ಗದಗ ಮೂಲದ ಇಬ್ಬರು ಕಾರ್ಮಿಕರು ಸಾವು

posted in: ರಾಜ್ಯ | 0

ಮಡಿಕೇರಿ: ಜಿಲ್ಲೆಯ ಚೇರಂಬಾಣೆ ಕೊಳಗದಾಳು ಬಳಿಯ ಪಾಕ ರಸ್ತೆಯಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದ ವೇಳೆ ಕಾಂಕ್ರೀಟ್ ಲಾರಿ ಕಂದಕಕ್ಕೆ ಉರುಳಿ ಬಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.

ಗದಗ ಮೂಲದ ಸಂತೋಷ್ ಭಂಡಾರಿ(೨೭) ಮತ್ತು ಪ್ರವೀಣ್(೨೧) ಮೃತರು.

ಕಳೆದ ಎರಡು ದಿನಗಳಿಂದ ಮಳೆ ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಚೇರಂಬಾಣೆ ಪಾಕ ಬಳಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೊಬ್ಬರು ರಸ್ತೆಯ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದರು. ಮಡಿಕೇರಿಯಿಂದ ಕಾಂಕ್ರೀಟ್ ತುಂಬಿದ್ದ ೧೦ ಚಕ್ರದ ಲಾರಿ ಕೊಳಗದಾಳು ಮಾರ್ಗವಾಗಿ ಪಾಕ ರಸ್ತೆಯ ತಡೆಗೋಡೆ ನಿರ್ಮಿಸುವ ಸ್ಥಳಕ್ಕೆ ತಲುಪಿದೆ. ಬಳಿಕ ಲಾರಿಯನ್ನು ಮೇಲ್ಭಾಗದಲ್ಲಿ ನಿಲ್ಲಿಸಿಕೊಂಡು ಕೆಳ ಭಾಗದಲ್ಲಿರುವ ತಡೆಗೋಡೆಗೆ ಕಾಂಕ್ರೀಟ್ ನ್ನು ತುಂಬಿಸಲಾಗುತ್ತಿತ್ತು. ಈ ವೇಳೆ ತಡೆಗೋಡೆಯ ಪಕ್ಕದಲ್ಲಿ ಕುಸಿತ ಉಂಟಾಗಿ ಲಾರಿ ಏಕಾಏಕಿ ಕೆಳಗೆ ಉರುಳಿ ಬಿದ್ದಿದೆ.

ಈ ವೇಳೆ ಕೆಳಭಾಗದಲ್ಲಿದ್ದ ಕೆಲಸ ಮಾಡುತ್ತಿದ್ದ ಗದಗ ಜಿಲ್ಲೆ ಇಂದಿರಾ ನಗರದ ನಿವಾಸಿಗಳಾದ ಸಂತೋಷ್ ಭಂಡಾರಿ ಹಾಗೂ ಪ್ರವೀಣ್ ಅವರು ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಾರಿ ಸಹಿತ ಮಣ್ಣಿನ ರಾಶಿ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿಟಾಚಿ ಯಂತ್ರಗಳನ್ನು ತಂದು ಇಬ್ಬರು ಕಾರ್ಮಿಕರ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಘಟನಾ ಸ್ಥಳಕ್ಕೆ ಭಾಗಮಂಡಲ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಉಳಿದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement