ಮಹತ್ವದ ನಿರ್ಧಾರ…ಸರ್ಕಾರಿ ಸಮಾರಂಭಗಳಲ್ಲಿ ಹೂಗುಚ್ಛ-ಶಾಲು-ಹಾರತುರಾಯಿ ನೀಡುವುದಕ್ಕೆ ಸರ್ಕಾರದಿಂದ ಬ್ರೇಕ್‌..!

ಬೆಂಗಳೂರು: ಇನ್ಮುಂದೆ ಸರ್ಕಾರಿ ಸ್ವಾಮ್ಯದ ಸಂಘ-ಸಂಸ್ಥೆಗಳು ಕಾರ್ಯಕ್ರಮ, ಸಭೆ-ಸಮಾರಂಭಗಳಲ್ಲಿ ಹೂಗುಚ್ಛ, ಹಣ್ಣಿನಬುಟ್ಟಿ ನೀಡಿ ಯಾವುದೇ ರೀತಿಯ ಅನಗತ್ಯ ಖರ್ಚುಗಳನ್ನು ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ಪೇಟ ಹಾಕುವುದು, ಶಾಲು ಹೊದಿಸಿ ನೆನಪಿನ ಕಾಣಿಕೆಗಳನ್ನು ನೀಡುವುದನ್ನು ಮಾಡುವಂತಿಲ್ಲ. ಶಿಷ್ಟಾಚಾರದ ಹೆಸರಲ್ಲಿ ಇಂತಹ ಸಂಪ್ರದಾಯಗಳ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ಅಧಿಕೃತ ಆದೇಶ ಹೊರಡಿಸಿದೆ.
ಸಭೆ ಸಮಾರಂಭಗಳಲ್ಲಿ ಹೂಗುಚ್ಛ , ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಮೊದಲಾದ ಯಾವುದೇ ರೀತಿಯ ಕಾಣಿಕೆಗಳನ್ನು ನೀಡದಂತೆ ನಿರ್ದೇಶನ ನೀಡಿದ್ದಾರೆ. ಕಾಣಿಕೆ ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದು. ಈ ನಿರ್ದೇಶನವನ್ನು ಚಾಚೂತಪ್ಪದೆ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಸರ್ಕಾರದ ಸ್ವಾಮ್ಯಕ್ಕೊಳಪಡುವ ಎಲ್ಲಾ ಸಂಸ್ಥೆಗಳು ತಮ್ಮ ಅಧೀನಕೊಳ್ಳಪಡುವ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು (ಮಂಗಳವಾರ) ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದ್ದು, ಇನ್ಮುಂದೆ ಇಂತಹ ಪದ್ಧತಿ ಬೇಡ. ಅನವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕಿ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಸೂಚನೆ ಬೆನ್ನಲ್ಲೇ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕ ಕಾಣಿಕೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ ಹಸ್ತಾಂತರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement