ಶಾಸಕರ ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣ: ಮೂವರು ಆರೋಪಿಗಳ ತೀವ್ರ ವಿಚಾರಣೆ

ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸೂತ್ರಧಾರನಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಸಾಗರ್, ನವೀನ್, ಶ್ರೀಧರ ಎಂಬವರನ್ನು ಬಂಧಿಸಿದ್ದು, ಇಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆಎನ್ನಲಾಗಿದೆ.
ಶಾಸಕ ಸತೀಶರೆಡ್ಡಿ ಭೇಟಿಗೆ ಆರೋಪಿ ಸಾಗರ್ ಎರಡು ಬಾರಿ ಪ್ರಯತ್ನಿಸಿದ್ದನಂತೆ . ಆದರೆ, ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಬೇಸತ್ತು ತನ್ನ ಸ್ನೇಹಿತರಾದ ನವೀನ್ ಮತ್ತು ಶ್ರೀಧರ್ ಜತೆ ಸೇರಿ ಬೆಂಕಿ ಹಚ್ಚಲು ಸಂಚು ರೂಪಿಸಿದ್ದ ಎಂದು ವಿಚಾರಣೆಯಿಂದ ಗೊತ್ತಾಗಿದೆ.
ಅದರಂತೆ ಒಂದು ಕ್ಯಾನ್ ತಂದು ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಂದ ಪೆಟ್ರೋಲ್ ಕದ್ದು ಶಾಸಕರ ಮನೆ ಕಾಂಪೌಂಡ್ ಹಾರಿ ಬಂದು ಫಾರ್ಚೂನರ್ ಕಾರು ಮತ್ತು ಮಹೇಂದ್ರ ಥಾರ್ ಜೀಪ್‍ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು, ರಸ್ತೆ ಬದಿ ನಿಲ್ಲಿಸಿದ್ದ ರಮೇಶ್ ಎಂಬುವವರ ಬೈಕ್ ಕದ್ದು ಒಂದೇ ಬೈಕ್‍ನಲ್ಲಿ ಮೂವರೂ ಪರಾರಿಯಾಗಿದ್ದರು.
ಈ ನಡುವೆ ಬೈಕ್ ಕಳ್ಳತನವಾಗಿದ್ದ ಬಗ್ಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೊಮ್ಮನಹಳ್ಳಿ ಠಾಣೆ ಪೊಲೀಸರು ಪ್ರಕರಣದ ತನಿಖೆ ತೀವ್ರಗೊಳಿಸಿ ಘಟನಾ ಸ್ಥಳದಲ್ಲಿ ಹಾಗೂ ಬೇಗೂರು ಸುತ್ತಮುತ್ತಲ ರಸ್ತೆಗಳಲ್ಲಿನ 123 ಸಿಸಿಟಿವಿಗಳ ಫುಟೇಜ್‍ಗಳನ್ನು ಪರಿಶೀಲನೆ ಮಾಡಿದ್ದರು. ಬೈಕ್ ಕಳ್ಳತನವಾಗಿರುವುದಕ್ಕೂ, ಆರೋಪಿಗಳು ಬಳಸಿರುವ ಬೈಕ್ ಹೋಲಿಕೆಯಾಗಿದ್ದರಿಂದ ಪೊಲೀಸರು ತನಿಖೆ ಚುರುಕುಗೊಳಿಸಿದರು.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಮೊದಲು ಆರೋಪಿಯೊಬ್ಬನ ಮನೆ ಬಳಿ ಬೈಕ್ ನಿಂತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಆ ಬೈಕ್ ತೆಗೆದುಕೊಂಡು ಹೋಗಲು ಆರೋಪಿಗಳು ಬಂದೇ ಬರುತ್ತಾರೆಂದು ಒಂದು ತಂಡ ಕಾದು ಸ್ವಲ್ಪ ದೂರದಲ್ಲಿ ನಿಂತಿತ್ತು. ಕೆಲವೇ ನಿಮಿಷಗಳಲ್ಲಿ ಇಬ್ಬರು ಆರೋಪಿಗಳು ಬೈಕ್ ಬಳಿ ಬರುತ್ತಿದ್ದಂತೆ ಪೊಲೀಸರು ಸುತ್ತುವರಿದು ಅವರಿಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಿ ಮತ್ತೊಬ್ಬನನ್ನು ಬಂಧಿಸುವಲ್ಲಿ ಈ ತಂಡ ಯಶಸ್ವಿಯಾಗಿದೆ.
ಇದೀಗ ಈ ಮೂವರೂ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಈ ಹಿಂದೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement