ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಕೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ

ಬೆಂಗಳೂರು: ಬಜೆಟ್​ನಲ್ಲಿ ಪ್ರಸ್ತಾಪಿಸಿರುವಂತೆ ಸರ್ಕಾರಿ ಮಾದರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಸ್ಪೋಕನ್ ಇಂಗ್ಲಿಷ್’ ತರಗತಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಾಲೆ ಉಳಿಸಿ: ಕನ್ನಡ ಬೆಳೆಸಿ’ ಕುರಿತು ದುಂಡು ಮೇಜಿನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೋಬಳಿ/ಗ್ರಾಮ ಪಂಚಾಯತ ಮಟ್ಟದಲ್ಲಿ ಒಂದೊಂದು ಮಾದರಿ ಶಾಲೆ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಈ ಸಾಲಿನ ಬಜೆಟ್‌ನಲ್ಲಿ ಈ ಅಂಶವನ್ನು ಘೋಷಣೆ ಮಾಡಲಾಗಿದೆ. ಶಾಲೆಯ ಎಲ್ಲ ತರಗತಿಗಳಿಗೆ ಅಗತ್ಯ ಕೊಠಡಿಗಳು ಮತ್ತು ಎಲ್ಲ ಭಾಷಾ ವಿಷಯಕ್ಕೆ ತಲಾ ಒಬ್ಬರು ಶಿಕ್ಷಕರು ಲಭ್ಯವಿರುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಇಂತಹ ಶಾಲೆಗಳಲ್ಲಿ ಕನ್ನಡ ಕಲಿಕೆ ಜೊತೆಗೆ ಸ್ಪೋಕನ್ ಇಂಗ್ಲೀಷ್ ಕಲಿಸಿಕೊಡಲಾಗುತ್ತದೆ. ಇದೇ ಸಲಹೆಯನ್ನು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರೂ ನೀಡಿದ್ದು, ಅದನ್ನು ಸ್ವೀಕರಿಸಲಾಗುತ್ತದೆ’ ಎಂದು ಹೇಳಿದರು.
ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ವ್ಯಾಮೋಹ ಪಾಲಕರಲ್ಲಿ ಹೆಚ್ಚುತ್ತಿರುವುದರಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗಿ ಮುಚ್ಚುವ ಹಂತ ತಲುಪುತ್ತಿವೆ ಎಂದರು.

ಪ್ರಸ್ತುತ ರಾಜ್ಯದ 47 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ 3800 ಶಾಲೆಗಳ ದಾಖಲಾತಿ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. 562 ಶಾಲೆಗಳಲ್ಲಿ ಒಬ್ಬೊಬ್ಬರೇ ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಇಂಗ್ಲಿಷ್‌ ಕಲಿಕೆ ಆರಂಭಿಸಿದರೆ ಮಕ್ಕಳ ದಾಖಲಾತಿ ಹೆಚ್ಚುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದರು.
ಗ್ರಾಮ ಪಂಚಾಯತಕ್ಕೊಂದರಂತೆ ನಿರ್ವಿುಸುತ್ತಿರುವ ಸರ್ಕಾರಿ ಮಾದರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಬೋಧಿಸುವ ಜೊತೆಗೆ ಆಂಗ್ಲ ಭಾಷಾ ಶಿಕ್ಷಕರಿಂದ ‘ಸ್ಪೋಕನ್ ಇಂಗ್ಲಿಷ್’ ತರಗತಿ ನಡೆಸಲಾಗುವುದು. ಈ ವರ್ಷ ಹೊಸದಾಗಿ 3000 ಮಾದರಿ ಶಾಲೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಆಅಲ್ಲಿಯೂ ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸಲು ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ನಾಗೇಶ್ ಹೇಳಿದರು.
‘ಪ್ರಾಥಮಿಕ ಶಾಲಾ ಹಂತದಿಂದಲೇ ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳ ಪಠ್ಯ ಪುಸ್ತಕಗಳನ್ನು ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತಿದೆ. ಹಾಳೆಯ ಒಂದು ಬದಿ ಕನ್ನಡ ಇದ್ದರೆ, ಮತ್ತೊಂದು ಬದಿ ಇಂಗ್ಲೀಷ್‌ನಲ್ಲಿ ಮುದ್ರಿಸಲಾಗುತ್ತಿದೆ. 1ರಿಂದ 4ನೇ ತರಗತಿವರೆಗೆ ಈ ಎರಡು ವಿಷಯಗಳನ್ನು ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತದೆ. 2019-20ರಿಂದ 2021-22ರ ವರೆಗೆ ಪ್ರತಿ ವರ್ಷ ಒಂದೊಂದು ತರಗತಿಯಂತೆ 1ರಿಂದ 3ನೇ ತರಗತಿ ವರೆಗೆ ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತಿತ್ತು. ಈ ಶೈಕ್ಷಣಿಕ ವರ್ಷದಿಂದ 1ರಿಂದ4ನೇ ತರಗತಿ ವರೆಗೆ ಮುದ್ರಿಸಲಾಗುತ್ತಿದೆ ಎಂದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ದ್ವಿಭಾಷಾ ಶಿಕ್ಷಣ ಅವಶ್ಯ:
ರಾಜ್ಯದಲ್ಲಿ ಕನ್ನಡ ಶಾಲೆಗಳು ಉಳಿಯಬೇಕಾದಲ್ಲಿ, ವಿದ್ಯಾರ್ಥಿಗಳಿಗೆ ದ್ವಿಭಾಷಾ ಶಿಕ್ಷಣವನ್ನು ನೀಡಬೇಕು ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದರು. ಕನ್ನಡ ಶಾಲೆಗಳನ್ನು ಉಳಿಸಬೇಕಾದರೆ, ಆ ಶಾಲೆಗಳಲ್ಲಿ ಕನ್ನಡ ಜತೆಗೆ ಆಂಗ್ಲಭಾಷೆಯ ಪದಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಕನ್ನಡ ಭಾಷೆಯಲ್ಲಿ ಪಾಠಗಳನ್ನು ಅರ್ಥೈಸಬೇಕು. ಒಟ್ಟಾರೆ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ಜಾರಿಯಾಗಬೇಕು. ಏಕೆಂದರೆ, ಕನ್ನಡ ಕಲಿತರೆ, ತಾಂತ್ರಿಕ ಕೋರ್ಸ್​ಗಳಲ್ಲಿ ವ್ಯಾಸಂಗ ಮಾಡುವುದು ಕಷ್ಟ ಎಂಬ ಮನೋಭಾವನೆ ಎಲ್ಲ ಪಾಲಕರಲ್ಲೂ ಇದೆ ಎಂದರು.
ದುಂಡು ಮೇಜಿನ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ, ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿದ್ವಾಂಸರಾದ ಶತಾವಧಾನಿ ಗಣೇಶ, ಚಂದ್ರಶೇಖರ ದಾಮ್ಲೆ, ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸೇರಿ ಹಲವು ಸಾಹಿತಿಗಳು, ಬರಹಗಾರರು ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡಿದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement