ಚೀನಾದಲ್ಲಿ ಮುಂದುವರಿದ ಕೋವಿಡ್‌ ಉಲ್ಬಣ : ಸುಮಾರು 40 ಸಾವಿರ ದೈನಂದಿನ ಪ್ರಕರಣ ದಾಖಲು ; ಹೊಸ ದಾಖಲೆ, ಹೊಸ ನಿರ್ಬಂಧ

ನವದೆಹಲಿ: ನವೆಂಬರ್ 26 ರಂದು 39,791 ಹೊಸ ಕೋವಿಡ್ -19 ಸೋಂಕುಗಳ ದೈನಂದಿನ ದಾಖಲೆ ಪ್ರಕರಣಗಳನ್ನು ಚೀನಾ ವರದಿ ಮಾಡಿದೆ, ಅದರಲ್ಲಿ 3,709 ಪ್ರಕರಣಗಳು ರೋಗಲಕ್ಷಣಗಳನ್ನು ಹೊಂದಿದ್ದು ಮತ್ತು 36,082 ಸೋಂಕಿತರಿಗೆ ರೋಗಲಕ್ಷಣಗಳಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ.
ಭಾನುವಾರವೂ ಕೋವಿಡ್ ಸೋಂಕಿನಿಂದ ಒಬ್ಬನ ಸಾವು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 5,233 ಕ್ಕೆ ಏರಿದೆ. ದೇಶದಲ್ಲಿ ಒಂದು ದಿನದ ಹಿಂದೆ 35,183 ಹೊಸ ಪ್ರಕರಣಗಳು ದಾಖಲಾಗಿದ್ದವು. ಸತತ ನಾಲ್ಕು ದಿನಗಳಿಂದ ಪ್ರಕರಣಗಳು ಏರಿಕೆಯತ್ತ ಸಾಗಿದೆ.
ಚೀನಾದ ರಾಜಧಾನಿ, ಬೀಜಿಂಗ್ ಮತ್ತು ಉಳಿದ ಬೃಹತ್‌ ನಗರಗಳು ಉಲ್ಬಣ ತಡೆಗಟ್ಟಲು ಹೆಣಗಾಡುತ್ತಿವೆ, ಚಾಂಗ್‌ಕಿಂಗ್ ಮತ್ತು ಗುವಾಂಗ್‌ಝೌ ಪ್ರದೇಶಗಳು ಹೊಸ ಸೋಂಕುಗಳ ಬಹುಪಾಲು ವರದಿ ಮಾಡಿದೆ.

ಬೀಜಿಂಗ್‌ನಲ್ಲಿ ಸ್ಥಳೀಯ ಪ್ರಕರಣಗಳು ಜಿಗಿತವನ್ನು ಮುಂದುವರೆಸಿವೆ. ಹಿಂದಿನ ದಿನ 2,595 ಪ್ರಕರಣಗಳಿಗೆ ಹೋಲಿಸಿದರೆ, 66% ರಷ್ಟು ಏರಿಕೆಯಾಗಿ ಭಾನುವಾರ 4,307 ಪ್ರಕರಣಗಳು ದಾಖಲಾಗಿವೆ ಎಂದು ಸ್ಥಳೀಯ ಆಡಳಿತದ ಅಂಕಿಅಂಶಗಳು ತೋರಿಸಿವೆ. ಬೀಜಿಂಗ್‌ನ ಹೆಚ್ಚಿನ ನಿವಾಸಿಗಳಿಗೆ ತಮ್ಮ ಕಾಂಪೌಂಡ್‌ಗಳನ್ನು ಬಿಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ, ಹಲವಾರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳನ್ನು ಮುಚ್ಚಲಾಗಿದೆ ಮತ್ತು ಕಡಿಮೆ ತರಗತಿಯ ವಿದ್ಯಾರ್ಥಿಗಳನ್ನು ಆನ್‌ಲೈನ್ ತರಗತಿಗಳಿಗೆ ವರ್ಗಾಯಿಸಲಾಗಿದೆ.
ಸುಮಾರು 1.9 ಕೋಟಿ ಜನಸಂಖ್ಯೆಯ ದಕ್ಷಿಣದಲ್ಲಿರುವ ಸಮೃದ್ಧ ನಗರವಾದ ಗುವಾಂಗ್‌ಝೌ, ಒಂದು ದಿನದ ಮೊದಲು 7,419 ಪ್ರಕರಣಗಳಿಗೆ ಹೋಲಿಸಿದರೆ ಸ್ಥಳೀಯ ಪ್ರಕರಣಗಳಲ್ಲಿ ಕನಿಷ್ಠ ಇಳಿಕೆ 7,412 ಪ್ರಕರಣಗಳನ್ನುವರದಿ ಮಾಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

ಸೋಂಕನ್ನು ನಿಗ್ರಹಿಸುವ ತನ್ನ ಕಠಿಣ ನೀತಿಯ ಬಗ್ಗೆ ಬೀಜಿಂಗ್ ಸಾರ್ವಜನಿಕ ಕಳವಳ ಎದುರಿಸುತ್ತಿದ್ದು, ಚೀನಾದ ಕೋವಿಡ್ ನೀತಿ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಮಧ್ಯರಾತ್ರಿ ಉರುಂಕಿ ರಸ್ತೆಯಲ್ಲಿ ಹೂಗಳು ಮತ್ತು ಮೇಣದಬತ್ತಿಗಳನ್ನು ತಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ‘ಲಾಕ್‌ಡೌನ್ ಅಂತ್ಯಗೊಳಿಸಿ’ ಎಂಬ ಘೋಷಣೆಗಳನ್ನು ಕೂಗಿದರು.
ಲಾಕ್‌ಡೌನ್‌ಗಳು, ಸಾಮೂಹಿಕ ಪರೀಕ್ಷೆ ಮತ್ತು ಸಂಪರ್ಕತಡೆ ಕಡ್ಡಾಯಗೊಳಿಸುವ ತನ್ನ ಕಠಿಣ ‘ಶೂನ್ಯ-ಕೋವಿಡ್’ ನೀತಿಗೆ ಚೀನಾ ಅಂಟಿಕೊಳ್ಳಬೇಕು ಎಂದು ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಪದೇ ಪದೇ ಒತ್ತಾಯಿಸಿದ್ದಾರೆ. ಈ ನೀತಿಯು ದೇಶದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುವುದನ್ನು ಮುಂದುವರೆಸಿದೆ.
ಗುವಾಂಗ್‌ಝೌ ತನ್ನ 37 ಲಕ್ಷ ನಿವಾಸಿಗಳ ಬೈಯುನ್ ಜಿಲ್ಲೆಗೆ ಪ್ರವೇಶವನ್ನು ಸ್ಥಗಿತಗೊಳಿಸಿದರೆ, ಬೀಜಿಂಗ್‌ನ ನೈರುತ್ಯದಲ್ಲಿರುವ 1.1 ಕೋಟಿ ಜನರಿರುವ ಶಿಜಿಯಾಜುವಾಂಗ್‌ನ ಕೆಲವು ಪ್ರದೇಶಗಳ ನಿವಾಸಿಗಳಿಗೆ ಮನೆಯಲ್ಲೇ ಇರಲು ತಿಳಿಸಲಾಯಿತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement