ಹುಬ್ಬಳ್ಳಿ ನಗರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿ.ಬಿ.ಮರಿಗೌಡರ

(ಮಾರ್ಚ್‌  ೪ರಂದು ಶುಕ್ರವಾರ ಹುಬ್ಬಳ್ಳಿ ನಗರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೆಳನ ಉಣಕಲ್ಲಿನ ಪಿ.ಬಿ. ರಸ್ತೆಯ ಸಿದ್ಧಪ್ಪಜ್ಜನ ಸಭಾಂಗಣದಲ್ಲಿ ನಡೆದಿದೆ)
ಚನ್ನಪ್ಪಗೌಡ ಬಸನಗೌಡ ಮರಿಗೌಡರ ಎಲ್ಲರಿಗೂ ಸಿ.ಬಿ.ಮರಿಗೌಡರ ಸರ್ ಎಂದೇ ಚಿರಪರಿಚಿತರು. ೮೦ ವರ್ಷ ವಯಸ್ಸಿನ (ಜನನ:೦೧-೦೩-೧೯೪೩) ಇವರು ಪ್ರಾಥಮಿಕ ಶಿಕ್ಷಣವನ್ನು ಉಣಕಲ್ಲಿನಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಗಂಗಾಧರ ಹೈಸ್ಕೂಲಿನಿಂದ ಪಡೆದಿದ್ದಾರೆ. ಎಸ್.ಎಸ್.ಎಲ್.ಸಿ ೧೯೬೦ ರಲ್ಲಿ, ೧೯೬೧ ರಲ್ಲಿ ಟಿ.ಸಿ.ಎಚ್.ಪದವಿಯನ್ನು ಕೆ.ಎಲ್.ಇ. ಸಂಸ್ಥೆಯ ಗುರುಸಿದ್ದೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪಡೆದಿದ್ದಾರೆ.
ಹಾವೇರಿ ಜಿಲ್ಲೆಯ ಹಿರೆಕೆರೂರ ತಾಲೂಕಿನ ಮೇಗೂರ ಗ್ರಾಮದಲ್ಲಿ ಜೂನ ೧೯೬೧ ರಿಂದ ಶಿಕ್ಷಕ ವೃತ್ತಿ ಆರಂಭಿಸಿ ೧೯೬೪ ರಲ್ಲಿ ಎಚ್.ಡಿ.ಎಂ.ಸಿ ಕಮರಿಪೇಟೆ ಶಾಲೆಗೆ ಆಗಮಿಸಿ ೨೦೦೦ನೇ ಇಸ್ವಿಯಲ್ಲಿ ಬ್ರಾಡವೇ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದಾರೆ. ೧೩ ಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ೩೯ ವರ್ಷ ಸೇವೆ ಸಲ್ಲಿಸಿದ್ದು ಒಂದು ದಾಖಲೆ.
೧೯೭೮ ರಲ್ಲಿ ಬ್ರಹ್ಮಾವೃತ್ತ ಕೇಂದ್ರ ಸ್ಥಾಪಿಸಿ, ಆ ಸಂಸ್ಥೆಯ ಮೂಲಕ ಸತ್ಸಂಗ, ಪ್ರವಚನ, ಉಪನ್ಯಾಸ, ಶಿವಾನುಭವ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ. ೧೨೩ ಸಾಮೂಹಿಕ ವಿವಾಹಗಳನ್ನು ಆಯೋಜಿಸಿದ್ದಾರೆ.
ಮರಿಗೌಡರ ಅವರ ೫೮ ಕೃತಿಗಳು ಈಗಾಗಲೇ ಪ್ರಕಟವಾಗಿದ್ದು, ೫೯ ನೇ ಕೃತಿ ಸಾಸ್ವಿಹಳ್ಳಿ ಬಸವಾನಂದರು ಸತ್ಸಂಗದಲ್ಲಿ ಎಂಬ ಕೃತಿ ಪ್ರಕಟವಾಗಲಿದೆ. ಪ್ರತಿವರ್ಷ ಕ್ಯಾಲೆಂಡರ್ ಮುದ್ರಿಸಿ, ಸ್ನೇಹಿತರು, ಬಂಧುಗಳಿಗೆ, ಉಣಕಲ್ಲ ನಿವಾಸಿಗಳಿಗೆ ಹಂಚುತ್ತಾ ಬಂದಿದ್ದಾರೆ. ದಾನಿಗಳ ನೆರವಿನಿಂದಲೇ ೭೭ ಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸುವ ಮೂಲಕ ಎಲೆಯ ಮರೆಯ ಕಾಯಿಯಂತೆ ಸಾಧನೆ ಮಾಡಿದ್ದಾರೆ.

೫ ಜನ ಸಹೋದರರು, ೪ ಸಹೋದರಿಯರ ಸಂತೃಪ್ತ ಕುಟುಂಬ. ತಂದೆ ಬಸನಗೌಡರು ಉಣಕಲ್ಲಿನ ಗೌಡರು ಮತ್ತು ಅಧ್ಯಾತ್ಮಿಕ ಜೀವಿಗಳಾಗಿದ್ದರು. ನಿಜಗುಣರ ಮತ್ತು ಶರಣ ಸಾಹಿತ್ಯ ತಂದೆಯವರಿಂದ ಬಂದ ಬಳುವಳಿ. ತಾಯಿ ಸಂಗಮ್ಮ ಅವರಿಂದ ಸಂಸ್ಕಾರ ಪಡೆದದ್ದು ಅಪಾರ.
ವಿರೂಪಾಕ್ಷಗೌಡ ಮತ್ತು ಬಸನಗೌಡ’ಇಬ್ಬರು ಗಂಡು ಮಕ್ಕಳು, ಪತ್ನಿ ಕಸ್ತೂರಿದೇವಿ, ಸೊಸೆಯಿಂದಿರು, ಮೊಮ್ಮಕ್ಕಳು ಸಂತೃಪ್ತ ಪರಿವಾರ ಹೊಂದಿದ್ದಾರೆ. ೯ಕ್ಕೂ ಹೆಚ್ಚಿನ ಶಾಲಾ ಕಾಲೇಜುಗಳಲ್ಲಿ ಹಣಕಾಸಿನ ದತ್ತಿಗಳನ್ನು ಇಟ್ಟು, ಆ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರೋತ್ಸಾಹಿಸುತ್ತಿದ್ದಾರೆ.
ಜೀವಂತ ಇದ್ದಾಗ, ಸತ್ತವರಂತೆ ಇರಬೇಕು, ಸತ್ತಮೇಲೆ ಸಾವಿರ ವರ್ಷ ಬದುಕಬೇಕು ಎನ್ನುವ ಸಿದ್ಧಪ್ಪಜ್ಜ ವಾಣಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಮರಿಗೌಡ ಅವರು, ಸಿದ್ಧಪ್ಪಜ್ಜನ ಜೀವನ ಸಂದೇಶಗಳನ್ನು ಮತ್ತು ವಾಣಿಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುತ್ತ ಮುನ್ನಡೆಯುತ್ತಿದ್ದಾರೆ.
ಉಪಮಾತೀತರು ೨೦೦ ಪುಟಗಳ ಗ್ರಂಥ, ೨೫೦ ಶರಣರ ಭಾವಚಿತ್ರಗಳೊಂದಿಗೆ ಆ ಶರಣರ ವಚನಗಳನ್ನು ಮತ್ತು ೬೦೦ಕ್ಕೂ ಹೆಚ್ಚಿನ ತ್ರಿಪದಿಗಳನ್ನು ರಚಿಸಿದ್ದು, ಅವುಗಳನ್ನು ಪ್ರಕಟಿಸುವ ಸಂಕಲ್ಪ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಸಾಹಿತ್ಯ, ಸಾಂಸ್ಕೃತಿ, ಪರಂಪರೆ ಬೆಳೆಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎನ್ನುವ ಮರಿಗೌಡರು ಕನ್ನಡ ಶಿಕ್ಷಕರು, ನಿವೃತ್ತಿ ಆದ ದಿನವೇ ಹೊಸ ಶಿಕ್ಷಕರ ನೇಮಕಾತಿ ಆಗಬೇಕು ಎನ್ನುತ್ತಾರೆ. ಉದಯೋನ್ಮುಖ ಬರಹಗಾರರಿಗೆ ಕಮ್ಮಟಗಳನ್ನು ಸಂಘ, ಸಂಸ್ಥೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು, ಆಯೋಜಿಸುವುದರೊಂದಿಗೆ, ಅವರಿಗೆ ಹಣಕಾಸಿನ ನೆರವನ್ನು ನೀಡುವ ಮೂಲಕ ಬರಹಗಾರರಿಗೆ ಪ್ರೋತ್ಸಾಹಿಸ ಬೇಕೆನ್ನುತ್ತಾರೆ.
ಶಿಕ್ಷಣದಿಂದ ಮಕ್ಕಳು ಸಚ್ಚಾರಿತ್ರಾರಬೇಕು, ಸದ್ವಿವೇಕಿಗಳಾಗಬೇಕು, ಸುವಿದ್ಯಾವಂತರಾಗಬೇಕು, ಪರಿಪೂರ್ಣ ವ್ಯಕ್ತಿಗಳಾಬೇಕು, ನೀತಿವಂತರಾಗಬೇಕು. ರಾಷ್ಟ್ರ ಪ್ರೇಮಿಗಳಾಗಬೇಕು, ಪರಿಪೂರ್ಣ ವ್ಯಕ್ತಿ ಆಗಬೇಕು ಅಂದಾಗ ಮಾತ್ರ ನಾವು ಸುಭದ್ರ ನಾಡನ್ನು ನೋಡಬಹುದು ಎನ್ನುತ್ತಾರೆ ಸಿ. ವಿ. ಮರಿಗೌಡರ ಅವರು.
-ಡಾ. ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement