ಬೆಳ್ಳಂಬೆಳಗ್ಗೆ ಪ್ರಪಾತಕ್ಕೆ ಉರುಳಿದ ಬಸ್ : 12 ಮಂದಿ ಸಾವು, 27 ಜನರಿಗೆ ಗಾಯ

ಮುಂಬೈ: ಬಸ್ಸೊಂದು ಕಮರಿಗೆ ಬಿದ್ದು ಸುಮಾರು 12 ಜನರು ಮೃತಪಟ್ಟ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ – ಪುಣೆ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಸಂಗೀತ ತಂಡವೊಂದರ ಸದಸ್ಯರನ್ನು ಪುಣೆಯಿಂದ ಮುಂಬೈಗೆ ಕರೆದೊಯ್ಯುತ್ತಿದ್ದ ವೇಳೆ ಹೆದ್ದಾರಿಯ ಶಿಂಗ್ರೋಬಾ ದೇವಸ್ಥಾನದ ಬಳಿ ಮುಂಜಾನೆ 4:50ರ ಸುಮಾರಿಗೆ ಈ ಅಪಘಡ ಸಂಭವಿಸಿದೆ. ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಖೋಪೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಖೋಪೋಲಿ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಜಿ ಪ್ರಭು ವಾಡಕ್ ಗ್ರೂಪ್‍ನ ಸದಸ್ಯರು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‍ವಾಡ್‍ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಂಬೈನ ಗೋರೆಗಾಂವಿಗೆ ಹಿಂತಿರುಗುತ್ತಿದ್ದರು. ಶನಿವಾರ ನಡುರಾತ್ರಿ 1 ಗಂಟೆ ಸುಮಾರಿಗೆ ಬಸ್ ಸ್ಥಳದಿಂದ ನಿರ್ಗಮಿಸಿತ್ತು. ಪ್ರಯಾಣಿಕರು ಮುಂಬೈನ ಸಿಯಾನ್ ಮತ್ತು ಗೋರೆಗಾಂವ್‍ನ ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್‌ಗೆ ಸೇರಿದವರು ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.
ಮೃತರು ಮತ್ತು ಗಾಯಗೊಂಡವರು 18 ರಿಂದ 25 ವರ್ಷ ವಯಸ್ಸಿನವರು ಎಂದು ಹೆಚ್ಚುವರಿ ಎಸ್ಪಿ ಅತುಲ್ ಝೆಂಡೆ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರ ತಂಡ ಮತ್ತು ಚಾರಣಿಗರ ತಂಡ ಸದ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಖೋಪೋಲಿ ಪಟ್ಟಣವು ಮುಂಬೈನಿಂದ 70 ಕಿಮೀ ದೂರದಲ್ಲಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement