ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್‌ ನಾಯಕ ಅಖಂಡ ಶ್ರೀನಿವಾಸಮೂರ್ತಿ

ಶಿರಸಿ : ಬೆಂಗಳೂರಿನ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಮತ ಪಡೆದು ವಿಧಾನಸಭೆ ಪ್ರವೇಶಿಸಿದ್ದ ಇವರು ಟಿಕೆಟ್‌ ಘೋಷಣೆಯಾಗದ ಕಾರಣ ರಾಜೀನಾಮೆ ನೀಡಿದ್ದಾರೆ.
ಶಿರಸಿಯಲ್ಲಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಯಲ್ಲಿ ಭಾನುವಾರ ರಾತ್ರಿ 8:30ರ ಸುಮಾರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಸದ್ಯ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಸೋಮವಾರ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿ ಅಭಿಪ್ರಾಯಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿ ಎಲ್ಲಾ ಧರ್ಮದವರು ಅಣ್ಣ ತಮ್ಮಂದಿರ ರೀತಿ ಇದ್ದೇವೆ. ನನ್ನ ಕುರಿತು ಕ್ಷೇತ್ರದ ಯಾರಲ್ಲೂ ಬೇಕಾದರೂ ಕೇಳಿ ಮಾಹಿತಿ ಪಡೆದುಕೊಳ್ಳಲಿ. ಕಳೆದ ಚುನಾವಣೆಯಲ್ಲಿ ಅತೀ ಹೆಚ್ಚು ಅಂತರದಿಂದ ಗೆದಿದ್ದೇನೆ. ಆದರೆ, ನನಗೆ ಟಿಕೆಟ್ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಮನೆ ಸುಟ್ಟುಕೊಂಡರೂ ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ಆದರೆ, ಪಕ್ಷದಿಂದ ನೋವಿನ ಹೊರತು ನನಗೆ ಮತ್ತೇನೂ ಸಿಗುತ್ತಿಲ್ಲ. ನನಗೆ ಟಿಕೆಟ್ ತಪ್ಪಲು ಕಾಂಗ್ರೆಸ್ ಹಿರಿಯ ನಾಯಕರ ಕೈವಾಡವಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

ಪ್ರಮುಖ ಸುದ್ದಿ :-   ಮಂಗಳೂರಲ್ಲಿ ಅಭೂತಪೂರ್ವ ರೋಡ್ ಶೋ : ಕರಾವಳಿ ಜನರ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement