ಲೇಡಿ ಸಿಂಘಂ ಖ್ಯಾತಿಯ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಸಾವು : ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬ

ಅಸ್ಸಾಂನಲ್ಲಿ ‘ಲೇಡಿ ಸಿಂಘಂ’ ಎಂದೇ ಹೆಸರು ಗಳಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಾಗೂನ್‌ ನಗರದ ಸಮೀಪ ರಾಜ್ಯ ಹೆದ್ದಾರಿಯಲ್ಲಿ 30 ವರ್ಷ ವಯಸ್ಸಿನ ಜುನ್ಮೋನಿ ರಾಭಾ ಅವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಜುನ್ಮೋನಿ ರಾಭಾ ಅವರು ಒಬ್ಬರೇ ಇದ್ದರು ಎನ್ನಲಾಗಿದ್ದು, ವಾಹನದಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜುನ್ಮೋನಿ ರಾಭಾ ಅಸ್ಸಾಂ ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿವಾದಗಳಿಂದಾಗಿ ಅವರು ಹಲವು ಸಲ ಅಮಾನತುಗೊಂಡಿದ್ದರು. ಹಲವು ಕಷ್ಟಕರ ಪ್ರಕರಣಗಳನ್ನು ಧೈರ್ಯವಾಗಿ ಎದುರಿಸಿದ್ದ ಅವರು, ಉದ್ಯೋಗದ ಹೆಸರಿನಲ್ಲಿ ವಂಚಿಸಿದ್ದ ಸ್ವತಃ ಭಾವಿ ಪತಿಯನ್ನು ಬಂಧಿಸಿ ದೇಶಾದ್ಯಂತ ಹೆಸರು ಮಾಡಿದ್ದರು.
ಅಸ್ಸಾಂ ಪೊಲೀಸ್‌ ಅಧಿಕಾರಿಗಳು ಜುನ್ಮೋನಿ ರಾಭಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. ಜುನ್ಮೋನಿ ರಾಭಾ ಅವರು ಬಾಲಿವುಡ್ ಸಿನಿಮಾಗಳ ನಂತರ ಲೇಡಿ ಸಿಂಘಂ, ದಬಾಂಗ್ ಕಾಪ್ ಎಂದು ಜನಪ್ರಿಯತೆ ಗಳಿಸಿದ್ದರು.
ಗುವಾಹಟಿಯಲ್ಲಿ ಜುನ್ಮೋನಿ ರಾಭಾ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಈ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆಕೆಯ ಕುಟುಂಬವು ಅಪಘಾತದ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ. ಕಂಟೈನರ್ ಟ್ರಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಟ್ರಕ್ ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement