ಮೇ 28ರಂದು ನೂತನ ಸಂಸತ್ ಕಟ್ಟಡ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ನವದೆಹಲಿ: ನೂತನ ಸಂಸತ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 28 ರಂದು ಉದ್ಘಾಟಿಸಲಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ 1,200 ಸಂಸದರು ಇರಬಹುದಾಗಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ ಪ್ರಧಾನಿಯವರನ್ನು ಭೇಟಿ ಮಾಡಿ ನೂತನ ಸಂಸತ್ ಭವನವನ್ನು ಉದ್ಘಾಟಿಸುವಂತೆ ಆಹ್ವಾನಿಸಿದರು. ಹೊಸ ಕಟ್ಟಡವು ಸ್ವಾವಲಂಬಿ ಭಾರತ ಅಥವಾ ಆತ್ಮನಿರ್ಭರ ಭಾರತದ ಚೈತನ್ಯವನ್ನು ಸಂಕೇತಿಸುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮೋದಿ ಸರ್ಕಾರದ ಒಂಬತ್ತನೇ ವಾರ್ಷಿಕೋತ್ಸವದಂದು ನೂತನ ಸಂಸತ್‌ ಕಟ್ಟಡವನ್ನು ಉದ್ಘಾಟಿಸಲು ಅದ್ಧೂರಿ ಸಮಾರಂಭವನ್ನು ಯೋಜಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳ ಹಿಂದೆ ಮೇ 26, 2014 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.
ಡಿಸೆಂಬರ್ 2020 ರಲ್ಲಿ ನೂತನ ಸಂಸತ್ತಿನ ಕಟ್ಟಡದ ಶಿಲಾನ್ಯಾಸವನ್ನು ಪ್ರಧಾನಿ ಮೋದಿಯವರು ನೆರವೇರಿಸಿದ್ದರು. ಹೊಸ ಕಟ್ಟಡವು ರಾಷ್ಟ್ರದ ಪವರ್ ಕಾರಿಡಾರ್ ಆಗಿರುವ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿಯ ಭಾಗವಾಗಿದೆ.

ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಿಸಿದ ಹೊಸ ಸಂಸತ್ತಿನ ಕಟ್ಟಡವು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಭವನ, ಸಂಸತ್ತಿನ ಸದಸ್ಯರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿರುತ್ತದೆ. ಹೊಸ ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಮಾರ್ಷಲ್‌ಗಳು ಹೊಸ ಡ್ರೆಸ್ ಕೋಡ್ ಹೊಂದಿರುತ್ತಾರೆ.
ಕೇಂದ್ರದಲ್ಲಿ ತನ್ನ ಸರ್ಕಾರದ ಒಂಬತ್ತನೇ ವರ್ಷಾಚರಣೆಯನ್ನು ಗುರುತಿಸಲು, ಬಿಜೆಪಿಯು ಪ್ರಧಾನಿ ಮೋದಿಯವರ ರ್ಯಾಲಿ ಮತ್ತು ತನ್ನ ಹಿರಿಯ ನಾಯಕರಿಂದ 51 ಸಾರ್ವಜನಿಕ ಸಭೆಗಳನ್ನು ಒಳಗೊಂಡಂತೆ ಒಂದು ತಿಂಗಳ ಅವಧಿಯ ಪ್ರಚಾರ ಕಾರ್ಯಕ್ರಮವನ್ನು ಯೋಜಿಸಿದೆ.
2019 ರಲ್ಲಿ ಪ್ರಧಾನಿ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವಾದ ಮೇ 30 ರಿಂದ ಪ್ರಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಜೂನ್ 30 ರವರೆಗೆ ಅದು ಮುಂದುವರಿಯುತ್ತದೆ ಎಂದು ವರದಿಯಾಗಿದೆ. ಇದನ್ನು ಕಿಕ್‌ಸ್ಟಾರ್ಟ್ ಮಾಡಲು ಪ್ರಧಾನಿ ಮೋದಿ ಮೇ 30 ಅಥವಾ ಮೇ 31 ರಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement