ಬೆಂಗಳೂರು: ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಬೇಡಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ ಮುಖ್ಯಮಂತ್ರಿ ಸಿದರಾಮಯ್ಯ ಅವರ ಮುಂದೆಯೇ ಡಿಕೆ ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಸ್ವಾಮೀಜಿಯೊಬ್ಬರು ನೇರವಾಗಿ ಒತ್ತಾಯಿಸಿದ ವಿದ್ಯಮಾನ ನಡೆದಿದೆ.
ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ಒಕ್ಕಲಿಗ ಸಚಿವರು, ಶಾಸಕರು, ನಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಸಿದ್ದರಾಮಯ್ಯ ಅವರನ್ನು ವೇದಿಕೆಯಲ್ಲೇ ಬಹಿರಂಗವಾಗಿ ಒತ್ತಾಯಿಸಿದ್ದಾರೆ…!
ಎಲ್ಲರೂ ಮುಖ್ಯಮಂತ್ರಿಗಳಾಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿಕೆ ಶಿವಕುಮಾರ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯಮಂತ್ರಿ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿ.ಕೆ. ಶಿವಕುಮಾರ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನೀವು ಮನಸ್ಸು ಮಾಡಿದ್ರೆ ಸಾಧ್ಯ….
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಇದು ನಡೆಯಲಿದೆ. ಹಾಗಾಗಿ ದಯವಿಟ್ಟುಅವರು ಶಿವಕುಮಾರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ವೇದಿಕೆಯಲ್ಲೇ ಸಿದ್ದರಾಮಯ್ಯ ಅವರನ್ನು ಕೇಳಿಕೊಂಡರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹಾಗೂ ಸಚಿವರು ಉಪಸ್ಥಿತರಿದ್ದರು.
ಲೋಕಸಭೆ ಚುನಾವಣೆಯ ಬೆನ್ನಲ್ಲೇ ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿಕೆ ಶಿವಕುಮಾರ ಅವರನ್ನೇ ಗುರಿಯಾಗಿಸಿ ಈ ಚರ್ಚೆಗಳು ನಡೆಯುತ್ತಿದೆ. ಹೈಕಮಾಂಡ್ ಮಟ್ಟದಲ್ಲೂ ಸಿದ್ದರಾಮಯ್ಯ ಆಪ್ತರು ಈ ಕುರಿತಾಗಿ ಬೇಡಿಕೆ ಇಟ್ಟಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ