ಕೋಝಿಕ್ಕೋಡ್: ಗುರುವಾರ ಸಂಜೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ದೇವಸ್ಥಾನದ ಉತ್ಸವದ ವೇಳೆ ಎರಡು ಆನೆಗಳು ರೊಚ್ಚಿಗೆದ್ದು ನುಗ್ಗಿದ್ದರಿಂದ ಮೂವರು ಮೃತಪಟ್ಟು 30 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಕೊಯಿಲಾಂಡಿ ಪ್ರದೇಶದ ಮಣಕುಲಂಗರ ದೇವಸ್ಥಾನದಲ್ಲಿ ಉತ್ಸವದ ಸಮಯದಲ್ಲಿ ಪಟಾಕಿಗಳನ್ನು ಜೋರಾಗಿ ಸಿಡಿಸಿದ್ದರಿಂದ ಪೀತಾಂಬರನ್ ಎಂಬ ಆನೆಯು ಗಾಬರಿಗೊಂಡು ಓಡಿದ ನಂತರ ನಂತರ ಘಟನೆ ಪ್ರಾರಂಭವಾಯಿತು. ಆ ಆನೆ ಪಕ್ಕದಲ್ಲೇ ನಿಂತಿದ್ದ ಗೋಕುಲ ಎಂಬ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದೆ. ಆಗ ಎರಡು ಆನೆಗಳು ಮುಖಾಮುಖಿಯಾದವು. ನಂತರದ ಗೊಂದಲದಲ್ಲಿ, ನೆರೆದಿದ್ದ ಜನಸಮೂಹವು ಓಡಲು ಪ್ರಾರಂಭಿಸಿತು, ಇದರಿಂದಾಗಿ ಹಲವಾರು ಜನರು ಬಿದ್ದಿದ್ದಾರೆ ಭಯಭೀತರಾದ ಜನರು ಓಡಲು ಪ್ರಾರಂಭಿಸಿದಾಗ ಕಾಲ್ತುಳಿತವಾಗಿದೆ. ಆನೆ ದಾಳಿಯಿಂದ ದೇವಸ್ವಂ ಕಚೇರಿಗೆ ಹಾನಿಯಾಗಿದೆ. ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಹಾಗೂ ಸುಮಾರು 30 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕನಿಷ್ಠ ಐವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಮೃತರನ್ನು ಕುರುವಂಗಾಡ್ ಮೂಲದ ಲೀಲಾ, ಅಮ್ಮುಕುಟ್ಟಿ ಮತ್ತು ರಾಜನ್ ಎಂದು ಗುರುತಿಸಲಾಗಿದ್ದು ಗಾಯಾಳುಗಳನ್ನು ಕೊಯಿಲಾಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಟಾಕಿ ಸಿಡಿಸಿದ್ದರಿಂದ ಗಾಬರಿಗೊಂಡ ಒಂದು ಆನೆ ಇನ್ನೊಂದರ ಮೇಲೆ ದಾಳಿ ಮಾಡಿತು, ಮತ್ತು ಆನೆಗಳು ಓಡಿಹೋದವು. ಇದರಿಂದಾಗಿ ಜನರು ಎಲ್ಲಾ ದಿಕ್ಕುಗಳಿಗೂ ಓಡಿದರು. ಈ ಗಾಬರಿಯಲ್ಲಿಯೇ ಇಬ್ಬರು ಮಹಿಳೆಯರು ಸಾವಿಗೀಡಾದರು ಎಂದು ಹೇಳಲಾಗಿದೆ.
ದಾಳಿಯ ಸಮಯದಲ್ಲಿ, ಆನೆಗಳು ದೇವಾಲಯದ ಕಟ್ಟಡವನ್ನು ಧ್ವಂಸಗೊಳಿಸಿದವು, ನಂತರ ಕಟ್ಟಡ ಹತ್ತಿರದ ಜನರ ಮೇಲೆ ಕುಸಿಯಿತು. ಕಟ್ಟಡದ ಒಳಗೆ ಮತ್ತು ಹೊರಗಿನವರಿಗೆ ತೀವ್ರ ಗಾಯಗಳಾಗಿದ್ದು, ಗಂಭೀರವಾದ ಗಾಯಗಳಿಂದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಈ ದುರಂತ ಘಟನೆ ಗುರುವಾರ ಸಂಜೆ ಸಂಭವಿಸಿದೆ. “ಪಟಾಕಿ ಸಿಡಿದಂತಹ ದೊಡ್ಡ ಸದ್ದು ಕೇಳಿದಾಗ ಆನೆಗಳು ರೊಚ್ಚಿಗೆದ್ದು ದಾಳಿ ನಡೆಸಿವೆ. ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಂಡಿದ್ದವರು ಕಟ್ಟುವಾಯಲ್ ಮತ್ತು ಅನೆಲ್ ಎರಡೂ ಕಡೆಯಿಂದ ಆಗಮಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆನೆಗಳ ಬಳಿ ಪಟಾಕಿ ಸಿಡಿಸಿದಾಗ ಉನ್ಮಾದಗೊಂಡಿತು. ಆನೆಗಳನ್ನು ನಿಯಂತ್ರಿಸಲು ಗಂಟೆಗಟ್ಟಲೆ ಸಮಯ ಹಿಡಿಯಿತು” ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತುರ್ತು ವರದಿ ಸಲ್ಲಿಸುವಂತೆ ಕೋಝಿಕ್ಕೋಡ್ ಜಿಲ್ಲಾಧಿಕಾರಿ ಸ್ನೇಹಲ್ ಕುಮಾರ ಸಿಂಗ್ ಆದೇಶಿಸಿದ್ದಾರೆ. ಆನೆ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ದೇವಾಲಯದ ಉತ್ಸವವನ್ನು ಅನುಮತಿಯೊಂದಿಗೆ ನಡೆಸಲಾಗಿದೆ ಎಂದು ಪ್ರಾಥಮಿಕ ಮಾಹಿತಿಗಳು ಸೂಚಿಸುತ್ತವೆ. ಯಾವುದೇ ಕಾನೂನು ಉಲ್ಲಂಘನೆ ಸಂಭವಿಸಿದೆಯೇ ಎಂದು ನೋಡಲು ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಆನೆಗಳು ನುಗ್ಗಿ ಇಬ್ಬರು ಸಾವಿಗೀಡಾದ ಘಟನೆ ಪಾಲಕ್ಕಾಡ್‌ನ ಮಸೀದಿಯಲ್ಲಿ ಉತ್ಸವದ ವೇಳೆ ನಡೆದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ