ಬೆಂಗಳೂರು : ಧಾರಾಡದ ಬಿಜೆಪಿ ಮುಖಂಡ ಯೋಗೇಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸುಪ್ರೀಂಕೋರ್ಟ್ ನಿದೇರ್ಶನದಂತೆ ಇಂದು, ಶುಕ್ರವಾರ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾದ ನಂತರ ಕೋರ್ಟ್ ಸೂಚನೆ ಮೇರೆಗೆ ಸಿಬಿಐ ಅವರನ್ನು ವಶಕ್ಕೆ ಪಡೆದಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಪಡಿಸಿ, ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶರು ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ನ್ಯಾಯಾಲಯದಲ್ಲಿ ಹಾಜರಿದ್ದ ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿಯನ್ನು ವಶಕ್ಕೆ ಪಡೆದುಕೊಂಡರು.
ಯೋಗೇಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಬಂಧಿಸಲ್ಪಟ್ಟು 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಕುಲಕರ್ಣಿ ಅವರ ಮೇಲೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪ ಹೊರಿಸಲಾಗಿತ್ತು. ಜಾಮೀನು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಜಾಮೀನು ರದ್ದುಗೊಳಿಸುವಂತೆ ಕೋರಲಾಗಿತ್ತು.
2016 ರ ಜೂ. 15 ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ ಸದಸ್ಯನಾಗಿದ್ದ ಯೋಗೇಶ ಗೌಡ ಅವರನ್ನು ಅವರದ್ದೇ ಮಾಲೀಕತ್ವದ ಜಿಮ್ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಕೈವಾಡ ಇದೆ ಎಂದು ಆರೋಪಿಸಿ, ಅವರನ್ನು 2020 ನವೆಂಬರ್ 5 ರಂದು ಸಿಬಿಐ ಬಂಧಿಸಿತ್ತು. ಬಳಿಕ 2021ರ ಆ.11ರಂದು ಸುಪ್ರೀಂ ಕೋರ್ಟ್ ವಿನಯ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಸಾಕ್ಷಿಗಳಿಗೆ 1 ಲಕ್ಷ ರೂ. ಹಣದ ಆಮಿಷ ಒಡ್ಡಿರುವುದರಿಂದ ಜಾಮೀನು ರದ್ದತಿಗೆ ಮನವಿ ಮಾಡಿ ಸುಪ್ರೀಂ ಕೋರ್ಟ್ ಗೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು. ಹಾಗೂ ಒಂದು ವಾರದೊಳಗೆ ವಿಚಾರನೆ ನಡೆಯುತ್ತಿರುವ ಕೋರ್ಟ್ ಮುಂದೆ ಹಾಜರಾಗಲು ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಅವರು ಇಂದು, ಶುಕ್ರವಾರ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ