ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ ಸೇಥ್ ನೇಮಕ

ನವದೆಹಲಿ: ಭಾರತೀಯ ಭೂಸೇನೆಯ (ಇಂಡಿಯನ್ ಆರ್ಮಿ) ನೂತನ ಮುಖ್ಯಸ್ಥರಾಗಿ (ಚೀಫ್ ಆಫ್ ದಿ ಆರ್ಮಿ ಸ್ಟಾಫ್) ಲೆಫ್ಟಿನೆಂಟ್ ಜನರಲ್ ಧೀರಜ ಸೇಥ್ ಅವರು ನೇಮಕಗೊಂಡಿದ್ದಾರೆ.
ಪ್ರಸ್ತುತ ಭೂಸೇನಾ ಮುಖ್ಯಸ್ಥರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಅವರು ಜೂನ್ 30 ರಂದು ನಿವೃತ್ತರಾಗಲಿದ್ದು, ಅದೇ ದಿನದಿಂದ ಜಾರಿಗೆ ಬರುವಂತೆ ಧೀರಜ ಸೇಥ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಭೂಸೇನೆಯ ಉಪಮುಖ್ಯಸ್ಥರಾಗಿ (ವೈಸ್ ಚೀಫ್ ಆಫ್ ದಿ ಆರ್ಮಿ ಸ್ಟಾಫ್) ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಸೇಥ್ ಅವರು, ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಇವರು ಡಿಸೆಂಬರ್ 1986 ರಲ್ಲಿ ಭಾರತೀಯ ಭೂಸೇನೆಯ ಅತ್ಯಂತ ಪ್ರತಿಷ್ಠಿತ ವಿಭಾಗವಾದ ‘ಆರ್ಮರ್ಡ್ ಕಾರ್ಪ್ಸ್’ (ಸರಸ್ವತಿ ಯುದ್ಧಟ್ಯಾಂಕ್ ರೆಜಿಮೆಂಟ್) ಗೆ ನಿಯೋಜನೆಗೊಳ್ಳುವ ಮೂಲಕ ತಮ್ಮ ಮಿಲಿಟರಿ ಸೇವೆಯನ್ನು ಆರಂಭಿಸಿದ್ದರು.

ಸುಮಾರು ನಾಲ್ಕು ದಶಕಗಳ ಸುದೀರ್ಘ ಹಾಗೂ ಅತ್ಯಂತ ಗೌರವಾನ್ವಿತ ರಕ್ಷಣಾ ಸೇವೆಯ ಇತಿಹಾಸ ಹೊಂದಿರುವ ಲೆಫ್ಟಿನೆಂಟ್ ಜನರಲ್ ಧೀರಜ ಸೇಥ್ ಅವರು ಕಾರ್ಯಾಚರಣೆ, ಕಾರ್ಯತಂತ್ರ, ಸಾಮರ್ಥ್ಯ ಅಭಿವೃದ್ಧಿ ಮತ್ತು ಸಾಂಸ್ಥಿಕ ವಲಯಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಭಾರತೀಯ ಭೂಸೇನೆಯ ಯುದ್ಧ ಪರಿಣಾಮಕಾರಿತ್ವವನ್ನು ಹೆಚ್ಚಿಸುವಲ್ಲಿ ಮತ್ತು ದೀರ್ಘಾವಧಿಯ ಪರಿವರ್ತನೆಗೆ (ಟ್ರಾನ್ಸ್‌ಫಾರ್ಮೇಶನ್) ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ.
ವಿಶೇಷವಾಗಿ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ನೀಡಿದ ಕೊಡುಗೆಗಳಿಗಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ ಲೆಫ್ಟಿನೆಂಟ್ ಜನರಲ್ ಸೇಥ್ ಅವರು, ಸೇನೆಯ ಕಾರ್ಯಾಚರಣೆಯ ಅಗತ್ಯತೆಗಳನ್ನು ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಭವಿಷ್ಯದ ಯುದ್ಧಭೂಮಿಯ ಸವಾಲುಗಳಿಗೆ ತಕ್ಕಂತೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಮುಖ ಸುದ್ದಿ :-   ‘ಯೂಸರ್‌ನೇಮ್’ ವೈಶಿಷ್ಟ್ಯ ವಿವಾದ: ವಾಟ್ಸ್ಆ್ಯಪ್ ನಂತರ ಟೆಲಿಗ್ರಾಂ, ಸಿಗ್ನಲ್‌ಗೆ ಕೇಂದ್ರ ಸರ್ಕಾರದ ನೋಟಿಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement