ಬೆಂಗಳೂರು : ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಅಂಕ ವ್ಯವಸ್ಥೆ ಹಾಗೂ ಗ್ರೇಡ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಸುಧಾಕರ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಮಂಜುನಾಥ ಭಂಡಾರಿ ಅವರು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಅಂಕಗಳು ನೀಡುವ ವ್ಯವಸ್ಥೆ ಒಂದೊಂದು ವಿಶ್ವವಿದ್ಯಾಲಯಕ್ಕೆ ಒಂದೊಂದು ತೆರನಾದ ವ್ಯವಸ್ಥೆ ಇದೆ. ಅಲ್ಲದೆ, ಮೌಲ್ಯಮಾಪನ ವ್ಯವಸ್ಥೆ ಭಿನ್ನವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಅಂಕ ವ್ಯವಸ್ಥೆ ಹಾಗೂ ಗ್ರೇಡ್ ವ್ಯವಸ್ಥೆ ಜಾರಿಗೆ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಜಾರಿ ಮಾಡಬೇಕಾಗಿದೆ ಎಂದು ಹೇಳಿದರು
ನಕಲಿ ಪದವಿ ಹಾಗೂ ಡಾಕ್ಟರೇಟ್ ಕೊಡುವ ವಿವಿಗಳು ಜಾಸ್ತಿ ಆಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ಪದವಿಯನ್ನ ನೋಂದಣಿ ಮಾಡುವ ವ್ಯವಸ್ಥೆ ಜಾರಿ ಮಾಡಬೇಕು. ಸರ್ಕಾರಿ ವಿವಿಗಳಲ್ಲಿ ಅಂಕಗಳನ್ನು ನೀಡುವ ಪದ್ಧತಿ ಬದಲಾಗಿ ಗ್ರೇಡ್ ಪದ್ಧತಿಯನ್ನು ವಿವಿಗಳಲ್ಲಿ ಜಾರಿ ಮಾಡಬೇಕು ಎಂದು ಮಂಜುನಾಥ ಭಂಡಾರಿ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ ಅವರು, ರಾಜ್ಯದಲ್ಲಿ 30 ಖಾಸಗಿ ವಿವಿಗಳು ಇವೆ. ಖಾಸಗಿ ವಿವಿಗಳಲ್ಲಿ ಗ್ರೇಡಿಂಗ್ ಸಿಸ್ಟಮ್, ಅಂಕ ವ್ಯವಸ್ಥೆ ಬೇರೆ ಬೇರೆ ಇದೆ. ಸರ್ಕಾರ ವಿವಿಗಳ ವ್ಯವಸ್ಥೆ ಬೇರೆ ಇದೆ. ಇದರಿಂದ ಸಮಸ್ಯೆ ಆಗುತ್ತಿದೆ. ಅಂಕ ಮಾದರಿ ಅಧ್ಯಯನಕ್ಕೆ ರಚಿಸಿದ್ದ ಸಮಿತಿಯು ಎಲ್ಲ ವಿವಿಗಳಲ್ಲಿ ಅಂಕ ಮಾದರಿ, ಗ್ರೇಡ್ ಮಾದರಿ ಏಕರೂಪವಾಗಿ ಮಾಡಬೇಕು ಎಂದು ವರದಿ ನೀಡಿದೆ ಎಂದು ಹೇಳಿದರು. ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ನಲ್ಲಿ ಇದನ್ನು ಇಟ್ಟು ನಿರ್ಧಾರ ಮಾಡಲಾಗುವುದು. ಖಾಸಗಿ, ಸರ್ಕಾರ ವಿವಿಗಳಿಗೆ ಏಕರೂಪದ ಅಂಕ, ಗ್ರೇಡ್ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಉತ್ತರಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ