
ಕೋಲ್ಕತ್ತಾ : ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಸೋಲನುಭವಿಸಿದ ಬೆನ್ನಲ್ಲೇ, ಪಕ್ಷದೊಳಗೆ ತೀವ್ರ ರಾಜಕೀಯ ಅಸ್ಥಿರತೆ ತಲೆದೋರಿದೆ. ಇದಕ್ಕೆ ನಿದರ್ಶನವೆಂಬಂತೆ ರಾಜ್ಯದ ವಿವಿಧ ಮುನ್ಸಿಪಾಲಿಟಿಗಳ (ನಗರಸಭೆ/ಪುರಸಭೆ) ಕೌನ್ಸಿಲರ್‌ಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದು, ಟಿಎಂಸಿಗೆ ಭಾರಿ ಹಿನ್ನಡೆಯಾಗಿದೆ.
ರಾಜ್ಯಾದ್ಯಂತ ವಿವಿಧ ಪುರಸಭೆಗಳ 100ಕ್ಕೂ ಹೆಚ್ಚು ಕೌನ್ಸಿಲರ್‌ಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ತೃಣಮೂಲ ಕಾಂಗ್ರೆಸ್‌ನ ತಳಮಟ್ಟದ ರಚನೆಯಲ್ಲಿನ ಅಸಮಾಧಾನವನ್ನು ಇದು ಬಹಿರಂಗಪಡಿಸಿದೆ. ಟಿಎಂಸಿಯ ಭದ್ರಕೋಟೆಯಾಗಿದ್ದ ನಗರ ಪ್ರದೇಶದ ರಾಜಕೀಯ ಜಾಲವು ಈಗ ಸಂಪೂರ್ಣವಾಗಿ ದುರ್ಬಲಗೊಳ್ಳುತ್ತಿರುವುದನ್ನು ಈ ಬೆಳವಣಿಗೆಗಳು ತೋರಿಸುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮುನ್ಸಿಪಾಲಿಟಿಗಳಲ್ಲಿ ಸಾಮೂಹಿಕ ರಾಜೀನಾಮೆ ಪರ್ವ
ಪಕ್ಷಕ್ಕೆ ಅತಿ ದೊಡ್ಡ ಆಘಾತ ಎದುರಾಗಿರುವುದು ಭಾತ್ಪಾರಾ ಮುನ್ಸಿಪಾಲಿಟಿಯಲ್ಲಿ. ಇಲ್ಲಿನ ಒಟ್ಟು 35 ಕೌನ್ಸಿಲರ್‌ಗಳ ಪೈಕಿ ಅಧ್ಯಕ್ಷೆ ರೇಬಾ ರಹಾ ಸೇರಿದಂತೆ ಬರೋಬ್ಬರಿ 30 ಕೌನ್ಸಿಲರ್‌ಗಳು ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಹಾಲಿಸಹರ್ ಮುನ್ಸಿಪಾಲಿಟಿಯ 23 ಕೌನ್ಸಿಲರ್‌ಗಳ ಪೈಕಿ 16 ಮಂದಿ ರಾಜೀನಾಮೆ ನೀಡಿದ್ದಾರೆ. ಕಾಂಚ್ರಾಪಾರಾ ಮುನ್ಸಿಪಾಲಿಟಿಯ 14 ಕೌನ್ಸಿಲರ್‌ಗಳ ರಾಜೀನಾಮೆ ನೀಡಿದ್ದರೆ ಗರುಲಿಯಾ ಮುನ್ಸಿಪಾಲಿಟಿಯ 18 ಕೌನ್ಸಿಲರ್‌ಗಳ ರಾಜೀನಾಮೆ ನೀಡಿದ್ದಾರೆ. ಉತ್ತರ ಬರಾಕ್‌ಪೋರ್ ಮುನ್ಸಿಪಾಲಿಟಿ 15 ಕೌನ್ಸಿಲರ್‌ಗಳು, ಕೊಂಟಾಯಿ ಮುನ್ಸಿಪಾಲಿಟಿಯ 14 ಕೌನ್ಸಿಲರ್‌ಗಳು ಹಾಗೂ ಡೈಮಂಡ್ ಹಾರ್ಬರ್ ಮುನ್ಸಿಪಾಲಿಟಿಯ 16 ಸದಸ್ಯರ ಬಲದ ಮುನ್ಸಿಪಾಲಿಟಿಯಲ್ಲಿ 8 ಕೌನ್ಸಿಲರ್‌ಗಳು ರಾಜೀನಾಮೆ ನೀಡಿದ್ದಾರೆ.
ಕೌನ್ಸಿಲರ್‌ಗಳ ರಾಜೀನಾಮೆಗೆ ಅಸಲಿ ಕಾರಣವೇನು?
ಬಹಿರಂಗವಾಗಿ ಹಲವು ಕೌನ್ಸಿಲರ್‌ಗಳು ವೈಯಕ್ತಿಕ ಅಥವಾ ಸಾಂಘಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡುತ್ತಿದ್ದಾರೆ. ಆದರೆ, ತೆರೆಮರೆಯಲ್ಲಿ ಕಥೆಯೇ ಬೇರೆಯಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜಕೀಯ ರಕ್ಷಣೆ ಪಡೆದುಕೊಂಡು ಮುನ್ಸಿಪಾಲಿಟಿಗಳಲ್ಲಿ ಆಡಳಿತ ನಡೆಸುತ್ತಿದ್ದ ಕೌನ್ಸಿಲರ್‌ಗಳಿಗೆ ಈಗ ಭ್ರಷ್ಟಾಚಾರ ತನಿಖೆಯ ಭೀತಿ ಉಂಟಾಗಿದೆ ಎಂದು ಸ್ವತಃ ಟಿಎಂಸಿ ನಾಯಕರೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಿದ್ದಾರೆ.ಟಿಎಂಸಿ ಲಿಂಕ್ ಹೊಂದಿರುವ ಮುನ್ಸಿಪಲ್ ನಾಯಕರ ಸರಣಿ ಬಂಧನಗಳು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
ಮೇ 20ರಂದು ಬಿಧಾನನಗರ ಮುನ್ಸಿಪಲ್ ಕಾರ್ಪೊರೇಷನ್‌ನ ವಾರ್ಡ್ 34ರ ಕೌನ್ಸಿಲರ್ ಮತ್ತು ಬರೋ 5ರ ಅಧ್ಯಕ್ಷ ರಂಜನ್ ಪೋದ್ದಾರ್ ಅವರನ್ನು ಪೊಲೀಸರು ಬಂಧಿಸಿದರು. ಸಾಲ್ಟ್ ಲೇಕ್ ಮತ್ತು ಕರುಣಾಮಯಿ ಪ್ರದೇಶಗಳಲ್ಲಿ ಬಸ್ ಹಾಗೂ ಆಟೋ ಚಾಲಕರಿಂದ ನಿಯಮಿತವಾಗಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಇವರ ಮೇಲಿದೆ. ಇದಕ್ಕೂ ಕೆಲವು ದಿನಗಳ ಮುನ್ನ, ಬಿಧಾನನಗರದ ಮತ್ತೊಬ್ಬ ಕೌನ್ಸಿಲರ್ ಸಾಮ್ರಾಟ್ ಬರುವಾ ಅವರನ್ನು ಸುಲಿಗೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಕೂಚ್ ಬೆಹಾರ್‌ನಲ್ಲಿ, ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬೆದರಿಕೆ ಮತ್ತು ದೌರ್ಜನ್ಯ ಎಸಗಿದ ಆರೋಪದ ಮೇಲೆ ಟಿಎಂಸಿ ಕೌನ್ಸಿಲರ್ ಉಜ್ಜಲ್ ತಾರ್ ಅವರನ್ನು ಬಂಧಿಸಲಾಗಿದೆ.
ತೀವ್ರ ಟೀಕೆಗೆ ಗುರಿಯಾದ ‘ಡೈಮಂಡ್ ಹಾರ್ಬರ್ ಮಾಡೆಲ್’
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಭದ್ರಕೋಟೆಯಾಗಿರುವ ಡೈಮಂಡ್ ಹಾರ್ಬರ್‌ನಲ್ಲಿ ನಡೆದಿರುವ ರಾಜೀನಾಮೆಗಳು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿವೆ. ಫಾಲ್ಟಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೆಬಾಂಶು ಪಾಂಡಾ ಶೇ. 71 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ.
ಡೈಮಂಡ್ ಹಾರ್ಬರ್ ಮುನ್ಸಿಪಾಲಿಟಿಗೆ ರಾಜೀನಾಮೆ ನೀಡಿದ 8 ಕೌನ್ಸಿಲರ್‌ಗಳು, ತಮಗೆ ಮುನ್ಸಿಪಾಲಿಟಿ ನಡೆಸಲು ಪಕ್ಷದ ನಾಯಕತ್ವ ಸ್ವಾತಂತ್ರ್ಯ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. “ಇಷ್ಟು ದಿನ ಡೈಮಂಡ್ ಹಾರ್ಬರ್ ಮಾಡೆಲ್ ಹೆಸರಿನಲ್ಲಿ ಒಂದು ಬಲೂನ್ ಅನ್ನು ಉಬ್ಬಿಸಲಾಗಿತ್ತು. ಈಗ ಆ ಬಲೂನ್ ಒಡೆದುಹೋಗಿದೆ. ಇಲ್ಲಿ ಇಡೀ ವ್ಯವಸ್ಥೆಯನ್ನು ಪೊಲೀಸ್ ಅಧಿಕಾರಿಗಳೇ ನಿಯಂತ್ರಿಸುತ್ತಿದ್ದಾರೆ, ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಸ್ವಾತಂತ್ರ್ಯವಿಲ್ಲ” ಎಂದು ಕೌನ್ಸಿಲರ್ ತಮಾಲ್ ಹಲ್ದರ್ ಅಸಮಾಧಾನ ಹೊರಹಾಕಿದ್ದಾರೆ.
ಅಕ್ರಮವಾಗಿ ಕೆರೆಗಳನ್ನು ಮುಚ್ಚುವುದು, ಅನಧಿಕೃತ ಕಟ್ಟಡ ನಿರ್ಮಾಣ ಮತ್ತು ವಸೂಲಿ ದಂಧೆಯಲ್ಲಿ ಪೊಲೀಸರ ಒಂದು ವರ್ಗ ಶಾಮೀಲಾಗಿದೆ ಎಂದು ಹಲವು ಕೌನ್ಸಿಲರ್‌ಗಳು ಆರೋಪಿಸಿದ್ದಾರೆ.
ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲೂ ಬಿರುಕು
ಟಿಎಂಸಿಯ ಅತ್ಯಂತ ಪ್ರಬಲ ರಾಜಕೀಯ ಕೋಟೆಯೆಂದು ಪರಿಗಣಿಸಲ್ಪಟ್ಟಿರುವ ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಒಳಗೂ ಈಗ ಅಸಮಾಧಾನದ ಹೊಗೆಯಾಡುತ್ತಿದೆ. ಟಿಎಂಸಿ ಕೌನ್ಸಿಲರ್ ದೆಬಾಲಿನಾ ಬಿಸ್ವಾಸ್ ಅವರು ವಾರ್ಡ್ 74 ರ ಕೌನ್ಸಿಲರ್ ಆಗಿ ಮುಂದುವರಿಯುತ್ತಲೇ, ಬರೋ ನಂ. 9 ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಕುಟುಂಬಕ್ಕೆ ಸೇರಿದ 17 ಆಸ್ತಿಗಳಿಗೆ ಕೆಎಂಸಿ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಈ ರಾಜೀನಾಮೆ ಬಂದಿರುವುದು ಕುತೂಹಲ ಮೂಡಿಸಿದೆ.
ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮುಖ್ಯ ಚೇಂಬರ್‌ನ ಬಾಗಿಲು ತೆರೆಯದ ಕಾರಣ, ಕೆಎಂಸಿಯ ಮಾಸಿಕ ಅಧಿವೇಶನವನ್ನು ಮುಖ್ಯ ಸಭಾಂಗಣದಲ್ಲಿ ನಡೆಸಲು ಸಾಧ್ಯವಾಗದಿದ್ದಾಗ ಸಂಘರ್ಷ ಮತ್ತಷ್ಟು ತಾರಕಕ್ಕೇರಿತು. ಅಂತಿಮವಾಗಿ ಟಿಎಂಸಿ ಕೌನ್ಸಿಲರ್‌ಗಳು ಕೆಎಂಸಿ ಪ್ರಧಾನ ಕಚೇರಿಯ ಮನರಂಜನಾ ಕೊಠಡಿಯಲ್ಲೇ (Recreation Room) ಕಲಾಪ ನಡೆಸಬೇಕಾಯಿತು. ಈ ಬೆಳವಣಿಗೆಯನ್ನು ಮೇಯರ್ ಫಿರ್ಹಾದ್ ಹಕೀಮ್ ಅವರು “ಮುನ್ಸಿಪಾಲಿಟಿ ಇತಿಹಾಸದಲ್ಲೇ ಕಪ್ಪು ದಿನ” ಎಂದು ಬಣ್ಣಿಸಿದ್ದಾರೆ.
ಮಮತಾ ಬ್ಯಾನರ್ಜಿ ಎಚ್ಚರಿಕೆ
ಹೆಚ್ಚುತ್ತಿರುವ ಆತಂಕದ ನಡುವೆ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಧಾನನಗರ, ದಮ್ ದಮ್ ಮತ್ತು ಬರಾನಗರ ಸೇರಿದಂತೆ ಹಲವು ಮುನ್ಸಿಪಾಲಿಟಿಗಳ ಕೌನ್ಸಿಲರ್‌ಗಳೊಂದಿಗೆ ಸಭೆ ನಡೆಸಿದ್ದಾರೆ. ಚುನಾವಣಾ ಸೋಲಿನ ನಂತರ ಪಕ್ಷವನ್ನು ತೊರೆಯದಂತೆ ಅವರು ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. “ಪಕ್ಷ ಗೆದ್ದಾಗ ಮಾತ್ರ ಜೊತೆಗಿದ್ದು, ಸೋತಾಗ ಬಿಟ್ಟು ಹೋಗುವ ಕಾರ್ಯಕರ್ತರು ನಮಗೆ ಬೇಡ” ಎಂದು ಮಮತಾ ಬ್ಯಾನರ್ಜಿ ಕೌನ್ಸಿಲರ್‌ಗಳಿಗೆ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ