ಟಿ20 ಕ್ರಿಕೆಟ್‌ ವಿಶ್ವಕಪ್ 2026 : 15 ಸದಸ್ಯರ ಭಾರತದ ತಂಡ ಪ್ರಕಟ ; ಅಕ್ಷರ್ ಪಟೇಲ್ ಉಪನಾಯಕ

ನವದೆಹಲಿ : 2026ರ ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಗೆ ವೇದಿಕೆ ಸಿದ್ಧವಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬಲಿಷ್ಠ ಟೀಂ ಇಂಡಿಯಾವನ್ನು ಇಂದು, ಶನಿವಾರ ಪ್ರಕಟಿಸಿದೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ ಯಾದವ್ ತಂಡದ ನಾಯಕರಾಗಿದ್ದಾರೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ಹಾಗೂ ಶುಭ್​​ಮನ್ ಗಿಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ತಂಡದಲ್ಲಿ ಅಭಿಷೇಕ ಶರ್ಮಾ, ತಿಲಕ ವರ್ಮಾ, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಯುವ ಹಾಗೂ ಅನುಭವೀ ಆಟಗಾರರು ಸ್ಥಾನ ಪಡೆದಿದ್ದಾರೆ.
ಹಳೆಯ ಹುಲಿಗಳಿಲ್ಲದ ವಿಶ್ವಕಪ್: 2024ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ನಂತರ ಟಿ20 ಮಾದರಿಯಿಂದ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯಲ್ಲಿ ಭಾರತ ಈ ಬಾರಿ ಕಣಕ್ಕಿಳಿಯುತ್ತಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ, ಸತತ ಎರಡನೇ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸುವ ಗುರಿ ಹೊಂದಿದೆ.
ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 7 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕಾ (USA) ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಟೀಮ್ ಇಂಡಿಯಾ ಫೆಬ್ರವರಿ 15 ರಂದು ತನ್ನ ಬದ್ಧ ಎದುರಾಳಿ ಪಾಕಿಸ್ತಾನ ತಂಡವದ ವಿರುದ್ಧ ಪಂದ್ಯವಾಡಲಿದೆ. ಇದು ಶ್ರೀಲಂಕಾದ ಕೊಲೊಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.
ಟಿ20 ವಿಶ್ವಕಪ್ 2026ಕ್ಕೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ ಶರ್ಮಾ, ತಿಲಕ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್,
ವಾಷಿಂಗ್ಟನ್ ಸುಂದರ್, ಕುಲದೀಪ ಯಾದವ್, ವರುಣ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement