
ಚಿಕ್ಕಮಗಳೂರು : ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ೧೪ ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು, ಶುಕ್ರವಾರ (ಏ.10) ಮಧ್ಯಾಹ್ನ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಸಿಕ್ಕಿದೆ ಎಂದು ಹೇಳಲಾಗಿದೆ. ಕೇರಳದಿಂದ ಕಳೆದ ಏ. 7ರಂದು ಆಗಮಿಸಿದ್ದ40 ಜನರ ಪ್ರವಾಸಿ ತಂಡದಲ್ಲಿ ಕೇರಳದ ಪಾಲಕ್ಕಾಡ್ ಮೂಲದ ಬಾಲಕಿ ಶ್ರೀನಂದಾ ಕೂಡ ಇದ್ದರು.

ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತ ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಹಠಾತ್ತಾಗಿ ನಾಪತ್ತೆಯಾಗಿದ್ದರು.ಜನದಟ್ಟಣೆಯ ನಡುವೆ ಮೆಟ್ಟಿಲುಗಳನ್ನು ಇಳಿದು ಬರುವಾಗ ಅವಳು ಹಠಾತ್ತನೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಈ ಘಟನೆ ನಡೆದ ನಂತರ ಬಾಲಕಿ ಪತ್ತೆಗೆ ಕಾರ್ಯಚರಣೆ ನಡೆಸಲಾಗಿತ್ತು. ಬಾಲಕಿಯ ಪತ್ತೆಗಾಗಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್‌ಎಫ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ದಟ್ಟ ಅರಣ್ಯ ಮತ್ತು ಕಡಿದಾದ ಪರ್ವತ ಪ್ರದೇಶವಾದ್ದರಿಂದ ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಸಹ ಬಳಸಿ ಶೋಧ ನಡೆಸಲಾಗಿತ್ತು.
ಸತತ ಮೂರು ದಿನಗಳ ಕಾಲ ನಡೆಸಿದ ತೀವ್ರ ಶೋಧದ ನಂತರ, ಇಂದು, ಶುಕ್ರವಾರ (ಏ.10) ಮಾಣಿಕ್ಯಧಾರಾದ ಅತ್ಯಂತ ಆಳವಾದ ಪ್ರಪಾತದ ಕೆಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ