ನವಿಲುತೀರ್ಥ ಡ್ಯಾಂನಿಂದ ಬಿಟ್ಟ ನೀರಿನಿಂದ ನೆರೆ: ಕುಸಿದ ಮನೆಗಳು, ಅಪಾರ ಬೆಳೆನಷ್ಟ

posted in: ರಾಜ್ಯ | 0

ಗದಗ: ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮಲಪ್ರಭ ಹಾಗೂ ತುಂಗಭದ್ರಾ ನದಿಗಳ ಹರಿವು ಹೆಚ್ಚಳ ಹಾಗೂ ನವಿಲುತೀರ್ಥ ಆಣೆಕಟ್ಟೆಯಿಂದ ಹೊರ ಬಿಟ್ಟಿರುವ ನೀರಿನಿಂದಾಗಿ ಗದಗ ಜಿಲ್ಲೆಯ ಹಲವಾರು ಗ್ರಾಮಗಳು ಭಾಗಶಃ ಮುಳುಗಡೆ ಹಂತದಲ್ಲಿವೆ.

ಗದಗ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಹಲವಾರು ಅವಾಂತರಗಳನ್ನು ಸೃಷ್ಟಿಸಿದ್ದು, ಬೆಳಗಾವಿ ಜಿಲ್ಲೆಯ ನವಿಲುತೀರ್ಥ ಜಲಾಶಯದಿಂದ ಬಿಟ್ಟಿರುವ ನೀರು, ಗದಗ ಜಿಲ್ಲೆಯ ಹಲವಾರು ಗ್ರಾಮಗಳ ಜನರ ಜೀವನವನ್ನೇ ಬೀದಿಗೆ ತಂದಿದೆ.

ಮಲಪ್ರಭಾ ನದಿಯ ನೀರಿನಿಂದ ಬೆಣ್ಣೆ ಹಳ್ಳವು ತುಂಬಿ ಹರಿಯುತ್ತಿದ್ದು, ಹಲವು ರಸ್ತೆಗಳು, ಗ್ರಾಮಗಳು ಜಲಾವೃತವಾಗಿವೆ. ಬೆಣ್ಣೆಹಳ್ಳದ ಸೇತುವೆ ಜಲಾವೃತವಾಗಿದ್ದರೂ ಅದರಲ್ಲಿ ಲಾರಿ ದಾಟಿಸುವ ದುಸ್ಸಾಹಸಕ್ಕೆ ಮುಂದಾದ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ರೋಣ ತಾಲೂಕಿನ ಯಾವಗಲ್ ಗ್ರಾಮದ ಮಾರ್ಗವಾಗಿ ಸೇತುವೆ ದಾಟಿ ರೋಣ ಪಟ್ಟಣಕ್ಕೆ ಹೊರಟ್ಟಿದ ಲಾರಿ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದಿದೆ. ಲಾರಿಯಲ್ಲಿದ್ದ ಸಾಮಗ್ರಿಗಳು ನೀರು ಪಾಲಾಗಿವೆ. ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಏಳು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ನದಿ ನೀರು ನುಗ್ಗಿದ್ದರಿಂದ ಅಪಾರ ಬೆಳೆ ನಷ್ಟವಾಗಿದೆ. ಹೆಸರು, ಹತ್ತಿ, ಸೂರ್ಯಕಾಂತಿ, ಗೋವಿನ ಜೋಳ, ಸೇರಿದಂತೆ ಅನೇಕ ಬೆಳೆಗಳು ಪ್ರವಾಹದ ಆರ್ಭಟಕ್ಕೆ ಕೊಚ್ಚಿ ಹೋಗಿವೆ.

ಪ್ರಮುಖ ಸುದ್ದಿ :-   ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿ: ಸರ್ಕಾರದ ಆದೇಶ

ನರಗುಂದ ತಾಲೂಕಿನ ವಾಸನ ಗ್ರಾಮದ ಸುಶೀಲವ್ವ ತಾಯನವರ ಎಂಬುವರ ಮನೆಯ ಮೇಲ್ಛಾವಣಿ ಕುಸಿದಿದೆ. ಮನೆಯಲ್ಲಿ ತಾಯಿ ಮಗಳು ನಿದ್ರೆ ಮಾಡುವ ವೇಳೆ ಮೇಲ್ಚಾವಣಿ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಣ್ಣೆಹಳ್ಳದ ಪ್ರವಾಹದ ರಭಸಕ್ಕೆ ಹಲವು ಆಡು- ಕುರಿಗಳು, ಜಾನುವಾರುಗಳು ಕೊಚ್ಚಿ ಹೋಗಿವೆ. ಇದರಿಂದ ರೈತಾಪಿ ವರ್ಗ ತೀವೃ ಸಂಕಷ್ಟ ಎದುರಿಸುತ್ತಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement