ಸಚಿವ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ, ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳ ಸಂಪೂರ್ಣ ಕಡೆಗಣನೆ: ಈಶ್ವರ ಖಂಡ್ರೆ ಕಿಡಿ

ಯಾದಗಿರಿ:ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೇಶದ ಸಾಮಾನ್ಯ ವರ್ಗದ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಪರಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ ಪ್ರವಾಹ ಪ್ರದೇಶಗಳನ್ನು ವೀಕ್ಷಿಸಿ, ಸಂತ್ರಸ್ತ ಜನರ ಸಮಸ್ಯೆ ಆಲಿಸಲು ನಾನು ಯಾದಗಿರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ನೂತನ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ ಎದ್ದುಕಾಣುತ್ತಿದೆ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕದ ಹಿತ ಕಾಪಾಡುವ ಉದ್ದೇಶ ಹೊಂದಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರಕ್ಕೆ ರೈತರ ಹಿತ ಕಾಪಾಡುವುದು ಬೇಕಾಗಿಲ್ಲ. ಶಾಸಕರು, ಸಚಿವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಾಕಷ್ಟು ಒತ್ತಡಗಳಿದ್ದು, ಆರ್‌ಎಸ್‌ಎಸ್, ಬಾಂಬೆ ಬಾಯ್ಸ್, ಯಡಿಯೂರಪ್ಪ ಬಣ ಹಾಗೂ ಕೇಂದ್ರದ ದೆಹಲಿಯ ನಾಯಕರು ಇವರೆಲ್ಲರನ್ನು ಸಂಭಾಳಿಸಿ ಅಧಿಕಾರ ಹೇಗೆ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದರು.
ಅಚ್ಛೇ ದಿನ್ ತರುವುದಾಗಿ ದೇಶದ ಜನತೆಗೆ ಭರವಸೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂಧನ ಬೆಲೆಯನ್ನು ಗಗನಕ್ಕೇರಿಸುವ ಮೂಲಕ ದೇಶದ ಜನತೆಗೆ ಅತ್ಯಂತ ಕಷ್ಟದ ದಿನಗಳನ್ನು ನೀಡುತ್ತಿದ್ದಾರೆ. ಪೆಗಾಸಿಸ್ ಮೂಲಕ ರಾಜ್ಯ ಸರ್ಕಾರಗಳನ್ನು ಉರುಳಿಸುವ ಪ್ರಯತ್ನ ನಿರಂತರವಾಗಿ ಕೇಂದ್ರದಿಂದ ನಡೆಯುತ್ತಿದೆ. ಈ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ ಏಐಸಿಸಿ ನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯದ ಕೆಪಿಸಿಸಿ ಘಟಕದಿಂದ ನಿರಂತರವಾಗಿ ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಮರಿಗೌಡ ಹುಲ್‌ಕಲ್, ಮಾಜಿ ಎಂಎಲ್ಸಿ ಚೆನ್ನಾರೆಡ್ಡಿಗೌಡ ತುನ್ನೂರು, ಡಾ. ಶರಣಬಸವ ಕಾಮರೆಡ್ಡಿ, ಡಾ. ಭೀಮಣ್ಣ ಮೇಟಿ, ಬಸ್ಸುಗೌಡ ಬಿಳ್ಹಾರ್, ಅವಿನಾಶ ಜಗನ್ನಾಥ್ ಇದ್ದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ: ಸ್ಕೂಟಿಯಲ್ಲಿ ಹೋಗುವಾಗ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement