
ಬೆಂಗಳೂರು: ರಾಜ್ಯದ ಸುಮಾರು 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಪ್ರತಿ ದಿನ ಒಂದರಿಂದ ಒಂದೂವರೆ ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 8 ರಿಂದ 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಲಸಿಕೆ ಪಡೆಯಬೇಕು ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ 400 ರ ವರೆಗೆ ತಲುಪಿದೆ. ನಗರದಲ್ಲಿ 12 ಕ್ಲಸ್ಟರ್ ಗುರುತಿಸಲಾಗಿದೆ. ನಗರದಲ್ಲಿ 30 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಅದನ್ನು 40 ಸಾವಿರಕ್ಕೆ ಏರಿಸಲಾಗುವುದು ಎಂದು ತಿಳಿಸಿದರು.
ಸೋಂಕಿತರು ಹೆಚ್ಚಿರುವ ಪ್ರದೇಶಗಳಲ್ಲಿ ಸಂಪರ್ಕ ಪತ್ತೆ ಹೆಚ್ಚಿಸಬೇಕಿದೆ. ಹಿಂದಿನಂತೆ ಒಬ್ಬ ಸೋಂಕಿತನಿಗೆ 20 ಸಂಪರ್ಕಿತ ವ್ಯಕ್ತಿ ಪತ್ತೆ ಕಾರ್ಯ ನಡೆಸಬೇಕೆಂದು ಕೇಂದ್ರದ ನಿಯೋಗ ಸೂಚಿಸಿದೆ ಎಂದರು.
ಕೇರಳ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಸವಾಲು ಎದುರಾಗಿದೆ. ಸಭೆ ಸಮಾರಂಭ, ಹೋರಾಟಗಳಲ್ಲಿ ಒಂದು ತಿಂಗಳಾದರೂ ಹೆಚ್ಚು ಜನ ಸೇರದಂತೆ ಮಾಡಬೇಕು ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಮದುವೆ ಇನ್ನಿತರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ 500 ಕ್ಕಿಂತ ಹೆಚ್ಚು ಜನರಿರಬಾರದು ಎಂದರು.
ಮಂಗಳೂರಿಗೆ ಹೊರಗಿನಿಂದ ಹೆಚ್ಚಿನವರು ಬರುವುದರಿಂದ ಅಲ್ಲಿ ಹೆಚ್ಚು ತಪಾಸಣೆ ಮಾಡಬೇಕೆಂದು ಸೂಚಿಸಲಾಗಿದೆ..ಬೆಂಗಳೂರು ನಗರ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಉಡುಪಿ, ಕೊಡಗು, ಬೆಳಗಾವಿ, ತುಮಕೂರು ಜಿಲ್ಲೆಗಳು ಬಹಳ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ ಎಂದರು.



ನಿಮ್ಮ ಕಾಮೆಂಟ್ ಬರೆಯಿರಿ