ಸೂರ್ಯಕುಮಾರಗೆ ಬಿಸಿಸಿಐ ಶಾಕ್: ಟಿ20 ನಾಯಕತ್ವ-ತಂಡದಿಂದ ಗೇಟ್‌ಪಾಸ್‌ ; ಶ್ರೇಯಸ್ ಅಯ್ಯರ್‌ಗೆ ನಾಯಕತ್ವ, 15ರ ವೈಭವ ಆಯ್ಕೆ

ನವದೆಹಲಿ: ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಏಷ್ಯನ್ ಗೇಮ್ಸ್‌ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಟೀಮ್ ಇಂಡಿಯಾದಲ್ಲಿ ಬಿಸಿಸಿಐ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಅನುಭವಿ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ನೂತನ ಟಿ20 ನಾಯಕನನ್ನಾಗಿ ನೇಮಿಸಿದೆ. ಭಾರತ ತಂಡವನ್ನು ಎರಡನೇ ಬಾರಿಗೆ ಸತತ ಟಿ20 ವಿಶ್ವಕಪ್ ಪ್ರಶಸ್ತಿಯತ್ತ ಮುನ್ನಡೆಸಿದ್ದರೂ ಸಹ, ಸ್ಟಾರ್ ಬ್ಯಾಟರ್ ಸೂರ್ಯಕುಮಾರ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಈ ಪ್ರಮುಖ ನಿರ್ಧಾರಕ್ಕೆ ಕಾರಣ ಎಂದು ವರದಿಗಳು ದೃಢಪಡಿಸಿವೆ. ಮತ್ತೊಂದೆಡೆ, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ.

15 ವರ್ಷದ ವೈಭವ್ ಸೂರ್ಯವಂಶಿಗೆ ಒಲಿದ ಅದೃಷ್ಟ:
ಈ ತಂಡದಲ್ಲಿ ಅತ್ಯಂತ ಗಮನಾರ್ಹ ಅಂಶವೆಂದರೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಐಪಿಎಲ್ ಮತ್ತು ಭಾರತದ ಅಂಡರ್-19 ತಂಡದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ವೈಭವಗೆ ಹಿರಿಯರ ತಂಡದಿಂದ ಬುಲಾವ್ ಬಂದಿದೆ. ಮುಕ್ತಾಯಗೊಂಡ ಐಪಿಎಲ್ ಆವೃತ್ತಿಯಲ್ಲಿ ಕೇವಲ 16 ಇನ್ನಿಂಗ್ಸ್‌ಗಳಲ್ಲಿ 776 ರನ್ ಸಿಡಿಸಿ ಅಬ್ಬರಿಸಿದ್ದ ವೈಭವ್, ಇದೀಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ಟಿ20 ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ ವರ್ಮಾ, ನಿತೀಶಕುಮಾರ ರೆಡ್ಡಿ, ಅಕ್ಷರ ಪಟೇಲ್, ವಾಷಿಂಗ್ಟನ್ ಸುಂದರ, ವರುಣ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಮತ್ತು ಪ್ರಿನ್ಸ್ ಯಾದವ್.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ತೀವ್ರ: ಪಕ್ಷದ ಬ್ಯಾಂಕ್ ಖಾತೆಗಳನ್ನೇ ಸ್ಥಗಿತಗೊಳಿಸಲು ನಾಯಕನ ಪತ್ರ!

ಏಷ್ಯನ್ ಗೇಮ್ಸ್‌ಗೂ ಭಾರತ ತಂಡ ಪ್ರಕಟ:
ಮುಂಬರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್‌ಗೂ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಈ ಟೂರ್ನಿಯಲ್ಲೂ ಶ್ರೇಯಸ್ ಅಯ್ಯರ್ ಅವರೇ ನಾಯಕರಾಗಿ ಮುಂದುವರಿಯಲಿದ್ದು, ಯುವ ಆಟಗಾರ ತಿಲಕ ವರ್ಮಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಇಂಗ್ಲೆಂಡ್ ಪ್ರವಾಸದ ಟಿ20 ತಂಡಕ್ಕೂ ಮತ್ತು ಏಷ್ಯನ್ ಗೇಮ್ಸ್ ತಂಡಕ್ಕೂ ಕೇವಲ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಇಂಗ್ಲೆಂಡ್ ಪ್ರವಾಸದ ತಂಡದಲ್ಲಿರುವ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಿನ್ಸ್ ಯಾದವ್ ಅವರನ್ನು ಏಷ್ಯನ್ ಗೇಮ್ಸ್‌ನಿಂದ ಕೈಬಿಡಲಾಗಿದ್ದು, ಅವರ ಬದಲಿಗೆ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಅವರನ್ನು ಏಷ್ಯನ್ ಗೇಮ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಏಷ್ಯನ್ ಗೇಮ್ಸ್ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ವೈಭವ ಸೂರ್ಯವಂಶಿ, ಅಭಿಷೇಕ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಮ್ ದುಬೆ, ತಿಲಕ ವರ್ಮಾ (ಉಪನಾಯಕ), ನಿತೀಶಕುಮಾರ ರೆಡ್ಡಿ, ಅಕ್ಷರ ಪಟೇಲ್, ವಾಷಿಂಗ್ಟನ್ ಸುಂದರ, ವರುಣ ಚಕ್ರವರ್ತಿ, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ ಸಿಂಗ್ ಮತ್ತು ಜಸ್ಪ್ರಿತ್ ಬುಮ್ರಾ.

ಪ್ರಮುಖ ಸುದ್ದಿ :-   14 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement