ಉತ್ತರ ಭಾರತದ ಮಹಿಳೆಯರ ಕುರಿತು ಡಿಎಂಕೆ ನಾಯಕ ದಯಾನಿಧಿ ಮಾರನ್ ವಿವಾದಾತ್ಮಕ ಹೇಳಿಕೆ

ಚೆನ್ನೈ: ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಉತ್ತರ ಭಾರತ ಮತ್ತು ತಮಿಳುನಾಡಿನ ಮಹಿಳೆಯರನ್ನು ಹೋಲಿಕೆ ಮಾಡಿ ನೀಡಿರುವ ಹೇಳಿಕೆಯೊಂದು ಇದೀಗ ದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಚೆನ್ನೈನ ಕ್ವೈಡ್-ಎ-ಮಿಲ್ಲತ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಮಾರನ್, “ತಮಿಳುನಾಡಿನಲ್ಲಿ ಹೆಣ್ಣುಮಕ್ಕಳಿಗೆ ಓದಲು ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸಿ, ಕೇವಲ ಮಕ್ಕಳನ್ನು ಹೆರಲು ಹೇಳಲಾಗುತ್ತದೆ  ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
“ನಮ್ಮ ಹೆಣ್ಣುಮಕ್ಕಳು ಲ್ಯಾಪ್‌ಟಾಪ್ ಹಿಡಿದು ಆತ್ಮವಿಶ್ವಾಸದಿಂದ ಓದಬೇಕು. ಇದು ದ್ರಾವಿಡ ರಾಜ್ಯ, ಕಲೈಂಜರ್ ಮತ್ತು ಸ್ಟಾಲಿನ್ ಅವರ ನಾಡು. ಇಲ್ಲಿ ಪ್ರತಿಯೊಬ್ಬರೂ ಶಿಕ್ಷಿತರಾಗಿರುವ ಕಾರಣ ಜಾಗತಿಕ ಕಂಪನಿಗಳು ಚೆನ್ನೈಗೆ ಬರುತ್ತಿವೆ. ಆದರೆ ಉತ್ತರದಲ್ಲಿ ಮಹಿಳೆಯರಿಗೆ ಕೆಲಸಕ್ಕೆ ಹೋಗಬೇಡಿ, ಮನೆಯಲ್ಲೇ ಇರಿ ಎಂದು ಹೇಳಲಾಗುತ್ತದೆ,” ಎಂದು ಮಾರನ್ ಹೇಳಿದ್ದಾರೆ.
ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ‘ಉಲಗಂ ಉಂಗಲ್ ಕೈಯಿಲ್’ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿದರು.
ಬಿಜೆಪಿ ತಿರುಗೇಟು:
ಮಾರನ್ ಅವರ ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.ನಾರಾಯಣನ್ ತಿರುಪತಿ (ಬಿಜೆಪಿ ವಕ್ತಾರ): “ದಯಾನಿಧಿ ಮಾರನ್ ಮತ್ತೊಮ್ಮೆ ಉತ್ತರ ಭಾರತದ ಜನರನ್ನು ಅವಮಾನಿಸಿದ್ದಾರೆ. ಅವರಿಗೆ ಕನಿಷ್ಠ ಜ್ಞಾನವಿಲ್ಲ,” ಎಂದು ಕಿಡಿಕಾರಿದ್ದಾರೆ.
“ಭಾರತವು ‘ಶಕ್ತಿ’ಯನ್ನು ಆರಾಧಿಸುವ ದೇಶ. ಮಾರನ್ ಅವರಿಗೆ ನಮ್ಮ ಸಂಸ್ಕೃತಿ ತಿಳಿದಿಲ್ಲ. ಅವರು ಸೋನಿಯಾ ಗಾಂಧಿ ಅಥವಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಏನು ಹೇಳುತ್ತಾರೆ?” ಎಂದು ಬಿಜೆಪಿ ನಾಯಕಿ ಅನಿಲಾ ಸಿಂಗ್  ಪ್ರಶ್ನಿಸಿದ್ದಾರೆ.
ಡಿಎಂಕೆ ಸಮರ್ಥನೆ:
ವಿವಾದದ ಬೆನ್ನಲ್ಲೇ ಡಿಎಂಕೆ ನಾಯಕ ಟಿ.ಕೆ.ಎಸ್ ಇಳಂಗೋವನ್, “ತಮಿಳುನಾಡಿನಲ್ಲಿ ನಾವು ಮಹಿಳೆಯರಿಗಾಗಿ ಹೋರಾಡಿ ಅವರನ್ನು ಸಬಲೀಕರಿಸಿದ್ದೇವೆ. ಉತ್ತರದಲ್ಲಿ ಮಹಿಳೆಯರ ಪರವಾಗಿ ಹೋರಾಡುವವರು ಯಾರೂ ಇಲ್ಲ,” ಎಂದು ದಯಾನಿಧಿ ಮಾರನ್‌ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement