ನವದೆಹಲಿ: ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಮತ್ತು ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ ಅವರನ್ನು ಪಕ್ಷದ ಸಂಸದೀಯ ಪಾರ್ಟಿ ಅಧ್ಯಕ್ಷರಾಗಿ (Congress Parliamentary Party Chairperson) ಅವಿರೋಧವಾಗಿ ಮರು ಆಯ್ಕೆ ಮಾಡಲಾಯಿತು. ಅವರ ಹೆಸರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಗೌರವ ಗೊಗೊಯ್, ತಾರಿಕ್ ಅನ್ವರ್, ಕೆ ಸುಧಾಕರನ್ ಅವರು ಪ್ರಸ್ತಾಪಿಸಿದರು.
ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ, ಶಶಿ ತರೂರ್, ಅಜಯ ಮಾಕನ್, ಕಾರ್ತಿ ಚಿದಂಬರಂ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಸೇರಿದಂತೆ ಹಲವು ಪಕ್ಷದ ನಾಯಕರು ಭಾಗವಹಿಸಿದ್ದರು. ಸೋನಿಯಾ ಗಾಂಧಿಯವರು ಫೆಬ್ರವರಿಯಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ತನ್ನ ಮರು ಆಯ್ಕೆಯ ನಂತರ, ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಮತ್ತು ಸಂಸದೀಯ ರಾಜಕೀಯವನ್ನು ಮತ್ತೆ ಹಳಿಗೆ ತರಲು ಇದು ಹೊಸ ಅವಕಾಶವಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದರು. ಪ್ರಧಾನಿ ಮೋದಿ ಅವರು ತಾವು ಬಯಸಿದ ಜನಾದೇಶವನ್ನು ಕಳೆದುಕೊಂಡಿದ್ದಾರೆ ಮತ್ತು ಆ ಮೂಲಕ ನಾಯಕತ್ವದ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು. “ವೈಫಲ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬದಲು, ಅವರು ನಾಳೆ ಮತ್ತೆ ಪ್ರಮಾಣವಚನ ಸ್ವೀಕರಿಸಲು ಉದ್ದೇಶಿಸಿದ್ದಾರೆ” ಎಂದು ಅವರು ಟೀಕಿಸಿದರು.
ಇದಕ್ಕೂ ಮೊದಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (CWC) ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಳ್ಳುವಂತೆ ಒತ್ತಾಯಿಸಿ ಒಮ್ಮತದ ನಿರ್ಣಯ ತೆಗೆದುಕೊಂಡಿತು. ಅವರು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ