ಬೆಂಗಳೂರಿನ ಮಾನದಂಡ ಅನುಸರಿಸಿ ನಮಗ್ಯಾಕೆ ಶಿಕ್ಷೆ..?

ಧಾರವಾಡ:  ಅವೈಜ್ಞಾನಿಕವಾಗಿರುವ  ಶೇ. ೭೦ರಷ್ಟು ಶುಲ್ಕಪಡೆಯುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಶಾಲಾ ಶುಲ್ಕ ಪಡೆಯುವ ಆಧಾರವಾಗಲಿ, ನಗರಗಳ ಗ್ರೇಡ್ ಮೇಲಾಗಲಿ ಶುಲ್ಕ   ಕಡಿತಗೊಳಿಸುವಂತೆ ಆಗಬೇಕು ಎಂದು ಧಾರವಾಡ ಅನುದಾನ ರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಸ್ಥೆ ಹಾಗೂ ಧಾರವಾಡ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಆಗ್ರಹಸಿವೆ.

ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಈ ಸಂಘಗಳ ಪದಾಧಿಕಾರಿಗಳ,  ಸಣ್ಣ ಸಣ್ಣ ಖಾಸಗಿ ಅನುದಾನರಹಿತ ಶಾಲೆಗಳ ಶೈಕ್ಷಣಿಕ ಕೊಡುಗೆಯನ್ನು ಕಡೆಗಣಿಸುವುದು ಸರಿಯಲ್ಲ. ಬೆಂಗಳೂರು ಕೇಂದ್ರಿತ ಶುಲ್ಕದ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಇಡೀ ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಶುಲ್ಕ ರಿಯಾಯ್ತಿ ನೀಡುವುದು ಸರಿಯಲ್ಲಿ ಎಂದು ಹೇಳಿದ್ದಾರೆ.

ಪ್ರಮುಖವಾಗಿ, ಉತ್ತರ ಕರ್ನಾಟಕದಲ್ಲಿ ಸರಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳೇ ಹೆಚ್ಚಿವೆ. ಬಹುತೇಕ ಅವೆಲ್ಲವೂ ಶಿಕ್ಷಣ ಪ್ರಸಾರ  ಹಾಗೂ  ಮೌಲ್ಯಯುತ ಶಿಕ್ಷಣ ನೀಡುವಲ್ಲಿ ದೊಡ್ಡ ಕೊಡುಗೆ ನೀಡಿವೆ. ರಾಜ್ಕ್ಣದ ದಕ್ಷಿಣ ಭಾಗದಲ್ಲಿ ಕೇರಳ ಗಡಿ ಪ್ರದೇಶ  ಹೊರತುಪಡಿಸಿದರೆ, ತಮಿಳನಾಡು, ಆಂಧ್ರ, ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವುದು ಉತ್ತರ ಕರ್ನಾಟಕದ ಶಿಕ್ಷಣ ಸಂಸ್ಥೆಗಳು ಎಂಬುದನ್ನು ಸರ್ಕಾರ ಮನಗಾಣಬೇಕು.  ರಾಜ್ಯದ ಒಟ್ಟು ಮಕ್ಕಳಲ್ಲಿ ಶೇ. ೬೦ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿರುವುದನ್ನು ಶಿಕ್ಷಣ ಇಲಾಖೆಯ ಅಂಕಿ ಸಂಖ್ಯೆಗಳೇ ಹೇಳುತ್ತಿವೆ.
ಖಾಸಗಿ ಶಾಲೆಗಳವರು  ಆಯಾ ಪ್ರದೇಶಗಳ ಜನರ ಆರ್ಥಿಕ ಮಟ್ಟವನ್ನು ಆಧರಿಸಿ,  ಶಾಲೆಗಳಲ್ಲಿ ಶಾಲಾ ಶುಲ್ಕವನ್ನು ಪಡೆದುಕೊಂಡು ನಡೆಸುತ್ತಿದ್ದಾರೆ. ರಾಜ್ಯದ   ಎಲ್ಲ ಖಾಸಗಿ ಶಾಲೆಗಳು ಏಕರೂಪ  ಶುಲ್ಕ  ಪಡೆಯುತ್ತಿಲ್ಲ.   ಉತ್ತರ ಕರ್ನಾಟಕದಲ್ಲಿ ೫ ಸಾವಿರದಿಂದ ಅತೀ ಹೆಚ್ಚು ಅಂದರೆ ೩೦ ಸಾವಿರ ಶುಲ್ಕ ಪಡೆಯುತ್ತಿವೆ. ಆದರೆ ಬೆಂಗಳೂರಂತ ನಗರದಲ್ಲಿ ಕನಿಷ್ಠ  ಶುಲ್ಕವೇ  ೫೦ ಸಾವಿರವಿದೆ.  ೩  ಲಕ್ಷದ ವರೆಗೂ ಶುಲ್ಕ   ಆಕರಣೆ ಮಾಡುತ್ತಿದ್ದಾರೆ.ಹೀಗಾಗಿ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಉತ್ತರ ಕರ್ನಾಟಕದ ಶಿಕ್ಷಣ ಸಂಸ್ಥೆಗಳಿಗೆ ಒಂದೇ ಮಾನದಂಡ ಅನುಸರಿಸಿ ಆದೇಶಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸರಕಾರಿ ಶಾಲೆಗಳು ಶಿಕ್ಷಣ ಇಲಾಖೆಯ ನೇರ ಸುಪರ್ದಿಗೆ ಒಳಪಟ್ಟು ಕಾರ್ಯಮಾಡುತ್ತಿವೆ. ಸರಕಾರಿ ಹಾಗೂ ಕಾಸಗಿ ಶಾಲೆಯಲ್ಲಿ ಕಲಿಯುವ ಮಕ್ಕಳು  ಕರ್ನಾಟಕದ ಮಕ್ಕಳೆ. ಇಲ್ಲಿ ಮಕ್ಕಳ ವಿಷಯದಲ್ಲಿ ತಾರತಮ್ಯ ಸಲ್ಲದು. ಆದರೆ, ಈಗ ಸರಕಾರದ ನಡೆ ನೋಡುತ್ತಿದ್ದರೆ ಖಾಸಗಿ ಶಾಲೆಗಳು ಮತ್ತು ಸರಕಾರಿ ಶಾಲೆಗಳು ಬೇರೆ ಬೇರೆಯಾಗಿಯೇ ನೋಡುತ್ತಿರುವುದು ಖೇದಕರ ಸಂಗತಿ ಎಂದು ಹೇಳಿದ್ದಾರ.

ಸರ್ಕಾರ ಖಾಸಗಿ ಶಾಲೆಗಳ ಬಗ್ಗೆ  ಶೈಕ್ಷಣಿಕವಾಗಿ ನಿರ್ಣಯ ತೆಗೆದುಕೊಳ್ಳಬೇಕಾದಾಗ ಬೆಂಗಳೂರಿನ ಶಾಲೆಗಳ, ಬೆಂಗಳೂರಿನ ಪಾಲಕರು ಹಾಗೂ  ಬೆಂಗಳೂರಿನ ಚಿಂತಕರ ಅಭಿಪ್ರಾಯದ ಮೇಲೆ ನಿರ್ಣಯ ತೆಗೆದುಕೊಂಡು ಬೆಂಗಳೂರಿನ ಸಮಸ್ಯೆಯನ್ನು ಇಡೀ ರಾಜ್ಯದ ಸಮಸ್ಯೆ ಎಂದು ಬಿಂಬಿಸುತ್ತಿದೆ. ಸರ್ಕಾರ         ಈ ರೀತಿ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಹಲವಾರುಬಾರಿ ಶಿಕ್ಷಣ ಸಚಿವರಿಗೆ ಲಿಖಿತವಾಗಿ  ಹಾಗೂ ಧರಣಿ ಮೂಲಕ  ಗಮನಕ್ಕೆ ತರಲಾಗಿದೆ. ಹೀಗಿರುವಾಗ ಎರಡು ದಿನಗಳ ಹಿಂದೆ ಶಿಕ್ಷಣ ಸಚಿವರ ಹೇಳಿಕೆಯ ಮೇಲೆ ಶಿಕ್ಷಣ ಕಾರ್ಯದರ್ಶಿಗಳು ಆದೇಶ ಮಾಡಿದ್ದು,  ಶಾಲಾ ಶುಲ್ಕದಲ್ಲಿ  ಶೇಕಡಾ ೭೦ರಷ್ಟು ಬೋಧನಾ ಶುಲ್ಕ  ಮಾತ್ರ ತೆಗೆದುಕೊಳ್ಳಬೇಕು, ಉಳಿದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಆದೇಶ ಮಾಡಿದ್ದಾರೆ.   ಒಂದುವೇಳೆ ಪೂರ್ಣ ಶುಲ್ಕ ಪಡೆದಿದ್ದಲ್ಲಿ ಶೇಕಡಾ ೩೦ರಷ್ಟು ಶಾಲಾ ಶುಲ್ಕವನ್ನು ಮುಂದಿನ ಶೈಕ್ಷಣಿಕ ಶುಲ್ಕದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದೂ ಆದೇಶ ಮಾಡಿದ್ದಾರೆ.
ಅಂದರೆ ಒಟ್ಟು ಶೇಕಡಾ ೬೦ರಷ್ಟು ಶುಲ್ಕವನ್ನು ಪಡೆಯುವಂತಿಲ್ಲ ಎಂದಂತಾಯಿತು. ಇಲ್ಲಿ ಮೂರು ಲಕ್ಷ ಶುಲ್ಕ ಪಡೆಯುವ ಬೆಂಗಳೂರು ಶಾಲೆಗೂ ಮತ್ತು ಮೂರು ಸಾವಿರ ಶುಲ್ಕ ಪಡೆಯುವ ಶಾಲೆಗೂ ಒಂದೇ ಮಾನದಂಡ ಅನುಸರಿಸಲಾಗಿದೆ.  ಯಾವ ಆಧಾರದ ಮೇಲೆ ಆದೇಶ ಹೊರಡಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಶೇಕಡಾ ೩೦ರಷ್ಟು ಶುಲ್ಕದಲ್ಲಿ ಶಾಲೆಯ ಬಾಡಿಗೆ, ಕಟ್ಟಡ ಟ್ಯಾಕ್ಸ್, ವಿದ್ಯುತ್, ನೀರು, ಸ್ವಚ್ಛತೆ, ಶಿಕ್ಷಕರ ಪಿ.ಎಫ್, ಇ.ಎಂ.ಐ, ವಾಹನ ಮೆಂಟೇನೆನ್ಸ್, ವಾಹನ ವಿವಿಧ ತೆರಿಗೆಗಳು, ಇವನ್ನೆಲ್ಲ ಶಾಲೆಯ ಆಡಳಿತ ಮಂಡಳಿ ನಿರ್ವಹಿಸುತ್ತಿತ್ತು. ಈಗ ಈ ಖರ್ಚನ್ನು ಹೇಗೆ ನಿಭಾಯಿಸುವುದು? ಇದರ ಮಧ್ಯ ಮೂಲವೇತನವನ್ನು ಶಿಕ್ಷಕರಿಗೆ ನೀಡತಕ್ಕದ್ದು ಎಂದು ಆದೇಶಿಸುತ್ತದೆ. ಮೂಲವೇತನ ನೀಡದಂ ಶಾಲೆಗಳ ಪರವಾನಿಗೆ ನವೀಕರಣ ಮಾಡದೇ ರದ್ದು ಮಾಡಲಾಗುವುದು ಎಂದೂ ಇಲಾಖೆ ಹೇಳುತ್ತಿದೆ. ಯಾವುದೇ ನಿರ್ಣಯ ಕೈಕೊಳ್ಳುವಾಗ ವೈಜ್ಞಾನಿಕವಾಗಿ ಆಲೋಚನೆ ಮಾಡಿ ಅದರ ಸಾಧಕ -ಬಾಧಕಗಳನ್ನು ಯೋಚಿಸಬೇಕು. ಇಲ್ಲದಿದ್ದರೆ ಇಂಥ ಸುತ್ತೋಲೆಗಳು ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಅಪಅಯಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಆರ್ಥಿಕ  ಸಂಕಷ್ಟ  ಎದುರಿಸಿದ್ದಾರೆ. ಶಾಲೆಯ ಶುಲ್ಕವನ್ನು ಪಾಲಕರಿಂದ ಪಡೆಯುವಲ್ಲಿ ಕಡಿಮೆ ತೆಗೆದುಕೊಳ್ಳುವ ಸಂಬಂಧ ನಮ್ಮ   ಭಿನ್ನಾಬಿಪ್ರಾಯವಿಲ್ಲ. ಆದರೆ  ಅವೈಜ್ಞಾನಿಕ  ಆದೇಶದ ಬಗ್ಗೆ ತೀವ್ರ ವಿರೋಧವಿದೆ.  ಬೆಂಗಳೂರಿನ ಶಾಲೆಗಳನ್ನು ಮುಂದಿಟ್ಟುಕೊಂಡು ಎಲ್ಲ ಖಾಸಗಿ ಶಾಲೆಗಳು ಹಣ ಮಾಡುವ ದಂಧೆ ಮಾಡುತ್ತಿವೆ ಎನ್ನುವಂತಾಗಿದೆ. ಪ್ರಾಮಾಣಿಕವಾಗಿ ಶಿಕ್ಷಣ ಪ್ರಸಾರ ಮಾಡುತ್ತಿರವ ಶಾಲೆಗಳ ಮೇಲೆ ಗದಾ ಪ್ರಹಾರ ಮಾಡಿದಂತಾಗುತ್ತದೆ. ಇದರಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಎಷ್ಟೋ ಶಾಲೆಗಳು ಶಾಶ್ವತವಾಗಿ ಮುಚ್ಚುಕೊಳ್ಳುವಂತಾಗುತ್ತದೆ ಎಂದು ಹೇಳಿದ್ದಾರೆ.
ಬೇಡಿಕೆಗಳು..; ೧. ಅವೈಜ್ಞಾನಿಕವಾಗಿರುವ ಈ ಶೇಕಡಾ ೭೦ರಷ್ಟು ಶುಲ್ಕಪಡೆಯುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಶಾಲಾ ಶುಲ್ಕ ಪಡೆಯುವುದರ ಮೇಲೆ ಹಾಗೂ  ನಗರಗಳ ಗ್ರೇಡ್ ಮೇಲೆ ಶುಲ್ಕ   ಕಡಿತಗೊಳಿಸುವಂತೆ ಆಗಬೇಕು.
೨. ಮೂಲ ವೇತನಕ್ಕೆ ಸಂಬಂಧಪಟ್ಟಂತೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ, ಪಡೆಯುವ ಶುಲ್ಕ, ಕಾರ್ಯ ನಿರ್ವಹಿಸುವ ಶಿಕ್ಷಕರ ಸಂಖ್ಯೆಯ ಅನುಪಾತದಲ್ಲಿ ವೇತನವನ್ನು ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ಬರಬೇಕು.
೩. ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮಗ್ರ ಶಿಕ್ಷಣ ನೀತಿ   ರೂಪಿಸಲು ತಜ್ಞರ ಸಮಿತಿ ರೂಪಿಸಬೇಕು.
೪. ಶಾಲೆಗಳ ಮಾನ್ಯತೆ ನವೀಕರಣವನ್ನು ಪ್ರತಿ ೫ ‌ವರ್ಷಕ್ಕೊಮ್ಮೆ ಹಾಗೂ ಸತತ ೧೫ ವರ್ಷ   ಉತ್ತಮವಾಗಿ ಕಾರ್ಯನಿರ್ವಹಿಸಿದ ಶಾಲೆಗಳಿಗೆ ಶಾಶ್ವತ ನವೀಕರಣ ನೀಡಬೇಕು ಎಂದು  ಬಸವರಾಜ ಹೊರಟ್ಟಿ   ಶಿಕ್ಷಣ ಮಂತ್ರಿಗಳಾಗಿದ್ದ ಸಮಯದಲ್ಲಿ ಆದೇಶ ಮಾಡಿದ್ದರೂ ಇತ್ತೀಚಿಗೆ ಪ್ರತಿ ವರ್ಷ ಮಾನ್ಯತೆ ನವೀಕರಣಕ್ಕೆ ಇಲಾಖೆ ಆದೇಶ ಹೊರಡಿಸಿದೆ. ಮಾನ್ಯತೆ ನವೀಕರಣಕ್ಕೆ ವರ್ಷಕ್ಕೆ ರೂ. ೧೦,೦೦೦/- ಸರಕಾರ ಶುಲ್ಕ ಪಡೆಯುತ್ತದೆ. ಇದರಲ್ಲಿ ಯಾವುದೇ ರಿಯಾಯಿತಿ ನೀಡಿರುವದಿಲ್ಲ. ಮಾನ್ಯತೆ ಅಥವಾ ನವೀಕರಣಕ್ಕೆ ಸಂಬಂಧಿಸಿದಂತೆ ಅದು ನೀಡುವ ಸಂಬಂಧವಾಗಿ ಇಲಾಖೆಗೆ ಯಾವುದೇ ಸಮಯ ನಿಗದಿಯಿಲ್ಲ. ೨೦೧೯-೨೦ ರ ನವೀಕರಣ ಜನೇವರಿ -೨೦೨೧ ರಲ್ಲಿ ದೊರೆತಿದೆ. ಮತ್ತೆ ಎರಡು ತಿಂಗಳಿಗೆ ನವೀಕರಣಕ್ಕೆ ಅರ್ಜಿ ಹಾಕಿಕೊಳ್ಳಬೇಕು. ಅಂದರೆ ಐದು ವರ್ಷಕ್ಕೆ ೫೦,೦೦೦ ಶುಲ್ಕವನ್ನು ಒಂದು ಶಾಲೆ ಭರಿಸುವಂತಾಗುತ್ತಿದೆ. ಸರಕಾರದ ಆದೇಶ ನೋಡಿಯೂ ಅದರಂತೆ ನಡೆದುಕೊಳ್ಳದ ಇಲಾಖಾ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಕೊಳ್ಳುವಂತಾಗಬೇಕು.
೫. ಸೇವಾ ಭದ್ರತೆ ರಾಜ್ಯ ಸರಕಾರದ ನಿಯಮವಾಗಿದ್ದರು ರಾಜ್ಯದ ಯಾವುದೇ ಜಿಲ್ಲೆಗಳಲಿಲ್ಲದ ಸಮಸ್ಯೆ ಕೇವಲ ಧಾರವಾಡ ಜಿಲ್ಲೆಯಲ್ಲಿ ಮಾತ್ರ ಇದ್ದುದು ಯಾಕೆ ಎಂದು ಪ್ರಶ್ನಸಿದ್ದಾರೆ.
೬. ಎಲ್ಲ ಸರಕಾರಿ ಆದೇಶಗಳು ಕೇವಲ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಮಾತ್ರ ಅನ್ವಯಿಸುತ್ತವೆ. ಆದರೆ ಸರಕಾರಿ ಶಾಲೆಗಳಿಗೆ ಈ ಆದೇಶಗಳು ಅನ್ವಯಿಸುವದಿಲ್ಲ ಯಾಕೆ?
೭. ಪಿಯುಸಿ ಹಾಗೂ ಪದವಿ, ತಾಂತ್ರಿಕ ಕೋರ್ಸುಗಳಿಗೆ ಶುಲ್ಕ ವಿನಾಯಿತಿ ಇಲ್ಲ. ಇದು ಕೇವಲ ಪ್ರಾಥಮಿಕ ಹಾಗೂ ಫ್ರೌಡಶಾಲೆಗಳಿಗೆ ಮಾತ್ರ ಯಾಕೆ?
೮. ಕೆಲವು ಮಾಧ್ಯಮಗಳಲ್ಲಿ ತೋರಿಸಿರುವಂತೆ ವಾಹನ ಶುಲ್ಕ, ಸಮವಸ್ತ್ರ ಶುಲ್ಕವನ್ನು ನಮ್ಮ ಸಂಘದ ಯಾವುದೇ ಶಾಲೆಯವರು ಸಂಗ್ರಹಿಸಿಲ್ಲ. ಮಕ್ಕಳು ಶಾಲೆಗೆ ಬರುವುದಿಲ್ಲ. ಶಾಲೆಯೇ ಪ್ರಾರಂಭ ಇಲ್ಲದಿದ್ದಾಗ ವಾಹನ ಶುಲ್ಕ ಹೇಗೆ ಪಡೆಯಲು ಸಾಧ್ಯ? ಮಾಧ್ಯಮಗಳೂ ಸಹ ಬೆಂಗಳೂರ ಅಂದರೆ ಕರ್ನಾಟಕ ಎಂದು ಭಾವಿಸಿ ಈ ರೀತಿ ವರದಿ ಮಾಡುವುದು  ತರವಲ್ಲ.
೯. ಕೊರೋನಾ ಸಂಕಷ್ಟದ ನಡುವೆಯೂ ಖಾಸಗಿ ಶಾಲೆ, ಆಡಳಿತ ಮಂಡಳಿಗಳು ಶಿಕ್ಷಕರ ವೇತನ, ಇಎಸ್‌ಐ ಹಾಗೂ ಪಿಇ  ವಂತಿಗೆಯನ್ನು ಪಾವತಿಸುತ್ತ ಬಂದಿವೆ. ಇಎಸ್‌ಐ ಹಾಗೂ ಪಿಇ ರಿಯಾಯಿತಿ  ಸರಕಾರ ನೀಡಲು ಮುಂದಾಗಲಿ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

೧೦. ಸರಕಾರಕ್ಕೆ  ಶಿಕ್ಷಣದ ಬಗ್ಗೆ ಕಾಳಜಿ ಇದ್ದರೆ ಸರಕಾರಿ ಶಾಲೆಗಳನ್ನು ಸಬಲೀಕರಣ ಮಾಡಲು ಕ್ರಮ ಕೈಕೊಳ್ಳಲಿ.  ಖಾಸಗಿ ಶಾಲೆಗಳೆಲ್ಲವನ್ನೂ ರಾಷ್ಟ್ರೀಕರಣಗೊಳಿಸಿದರೆ  ಸ್ವಾಗತಿಸುತ್ತೇವೆ.
೧೧. ಒಂದುವೇಳೆ ಸರಕಾರ ಈಗ ಶೇಕಡಾ ೩೦ರಷ್ಟು ಬೋಧನಾ ಶುಲ್ಕದಲ್ಲಿ ಕಡಿಮೆ ಪಡೆಯುವ ಆದೇಶ ಹೊರಡಿಸಿದ್ದನ್ನು ಹಿಂಪಡೆಯದಿದ್ದರೆ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement