ಹಂಪಿಯಲ್ಲಿ ಇನ್ನಷ್ಟು ಉತ್ಖನನ ನಡೆಯಲಿ: ಆನಂದ ಸಿಂಗ್‌

ಹೊಸಪೇಟೆ: ವಿಜಯನಗರದ ರಾಜಧಾನಿಯಾಗಿದ್ದ ಐತಿಹಾಸಿಕ ಹಂಪಿಯ ಅಭಿವೃದ್ಧಿಗೆ ಕೇಂದ್ರ ಸರಕಾರ 480 ಕೋಟಿ ರೂ.ನೀಡಿದೆ. ಹಂಪಿಯ ಇತಿಹಾಸವನ್ನು ಸಂಶೋಧಿಸುವ ಕೆಲಸವಾಗಬೇಕು ಎಂದು ಸಚಿವ ಆನಂದಸಿಂಗ್ ಹೇಳಿದರು.
ಅವರು ಗುರುವಾರ ಐತಿಹಾಸಿಕ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪುರಂದರದಾಸರ ಆರಾಧನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಅಚ್ಚುಕಟ್ಟಾಗಿ ಸಂಶೋಧನೆ ಮಾಡಿ;ನೈಜ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕಿದೆ ಮತ್ತು ಈ ಅಮೂಲ್ಯ ಸಾಮ್ರಾಜ್ಯದ ಕುರುಹುಗಳನ್ನು ರಕ್ಷಿಸುವ ಕೆಲಸವನ್ನೂ ನಾವೆಲ್ಲ ಮಾಡಬೇಕಿದೆ ಎಂದರು.
ಇಲ್ಲಿನ ಪ್ರತಿ ಕಲ್ಲು ಕೂಡ ಇತಿಹಾಸ ಹೇಳುತ್ತದೆ. ಅಧಿಕಾರಿಗಳ ಜೊತೆಗೆ ಇಂದು ಪರಿವೀಕ್ಷಣೆ ನಡೆಸಿದ ಸಂದರ್ಭದಲ್ಲಿ ಹಲವಾರು ಸ್ಥಳಗಳನ್ನು ನೋಡಿ ಆಶ್ಚರ್ಯಚಕಿತನಾದೆ. ಹಂಪಿಯಲ್ಲಿ ಇದುವರೆಗೆ ಉತ್ಖನನವಾಗಿರುವುದು ಕೇವಲ ಶೇ.10ರಷ್ಟು ಮಾತ್ರ;ಇನ್ನೂ ಶೇ.90ರಷ್ಟು ಉತ್ಖನನ ನಡೆಯಬೇಕಿದೆ ಎಂದರು.
ದಾಸಶ್ರೇಷ್ಠರಲ್ಲಿ ಒಬ್ಬರಾಗಿರುವ ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಕಟ್ಟುವ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ವಿಶೇಷ ಉಪನ್ಯಾಸ ನೀಡಿದ ವೀರಶೈವ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ಅವರು ಪುರಂದರದಾಸರು ಕೀರ್ತನೆಗಳ ಮೂಲಕ ನಡೆಸಿದ ವೈಚಾರಿಕ ಕ್ರಾಂತಿ ಹಾಗೂ ಕೀರ್ತನೆಗಳ ಮೂಲಕ ನಡೆಸಿದ ಜಾಗೃತಿಯನ್ನು ಪ್ರಸ್ತುತಪಡಿಸಿದರು.
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ,ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮಾತನಾಡಿದರು.
ಪ್ರಾಧ್ಯಾಪಕ ಮಾನಕಾರಿ ಆಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು.   ನಂತರ ಕೀರ್ತನೆಗಳ ಗಾಯನ,ನೃತ್ಯ, ಹಾಡುಗಾರಿಕೆ ಮೊದಲಾದ ವರ್ಣ ರಂಜಿತ ಕಾರ್ಯಕ್ರಮಗಳು ನಡೆದವು.
ಪುರಂದರದಾಸರ ಆರಾಧನೋತ್ಸವ ವೀಕ್ಷಿಸಲು ನಾಡಿನ ವಿವಿಧೆಡೆಯಿಂದ ಜನರು ಆಗಮಿಸಿದ್ದರು.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement