
ಮಂಗಳೂರು: ಶಿಕ್ಷಣ ಕ್ಷೇತ್ರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಅನೇಕ ಕ್ರಾಂತಿಕಾರಕ ಸುಧಾರಣೆಗಳನ್ನು ರಾಜ್ಯ ಸರಕಾರ ಕೈಗೊಂಡಿದ್ದು, ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಮಂಗಳೂರಿನಲ್ಲಿಂದು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ʼಸೆಂಟರ್ ಆಫ್ ಎಕ್ಸ್‌ಲೆನ್ಸ್, ರೀಸರ್ಚ್ ಡಿಸೈನ್ ಲ್ಯಾಬ್ ಮತ್ತು ಇಂಡಸ್ಟ್ರೀ ಹಬ್ʼ ಅನ್ನು ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು, ಈಗ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಸ್ಥಿತಿಗತಿಗಳು ಆಮೂಲಾಗ್ರವಾಗಿ ಸುಧಾರಿಸುತ್ತವೆ ಎಂದರು.
ವೃತ್ತಿಪರ ನೈಪುಣ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಡಿಪ್ಲೊಮಾ ತರಗತಿಗಳ ಪಠ್ಯವನ್ನು ಆಮೂಲಾಗ್ರವಾಗಿ ಪರಿಷ್ಕರಣೆ ಮಾಡಲಾಗುತ್ತಿದೆ. ಈಗಾಗಲೇ ಈ ಕೆಲಸ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದರು.
ಉದ್ಯೋಗ ಮಾರುಕಟ್ಟೆ, ಜಾಗತಿಕ ಔದ್ಯೋಗಿಕ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಡಿಪ್ಲೊಮೋ ಹಾಗೂ ಎಂಜಿಯರಿಂಗ್ ಕಾಲೇಜುಗಳೂ ಸೇರಿದಂತೆ ಉನ್ನತ ಶಿಕ್ಷಣದ ಎಲ್ಲ ಸಂಸ್ಥೆಗಳಿಗೂ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಈ ಪೈಕಿ ಕೈಗಾರಿಕೆಗಳಲ್ಲಿಯೇ ಇಂಟ್ರನ್‌ಶಿಪ್‌ಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ಇದೇ ದಿಸೆಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.



ನಿಮ್ಮ ಕಾಮೆಂಟ್ ಬರೆಯಿರಿ