ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯದಿದ್ದರೆ ರಾಷ್ಟ್ರಪತಿಗೆ ದೂರು : ಕಾಂಗ್ರೆಸ್ ಎಚ್ಚರಿಕೆ

ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಡಬೇಕು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು, ಇಲ್ಲದೇ ಹೋದರೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರಿಗೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್‌ ಎಚ್ಚರಿಸಿದೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿಂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡದಿದ್ದರೆ ರಾಜ್ಯಕ್ಕೆ ಹಾನಿಯಾಗಲಿದೆ ಎಂದು ಹೇಳಿದ್ದಾರೆ.
ರಾಸಲೀಲೆಗೆ ಆ ಹೆಣ್ಣುಮಗಳು ಒಪ್ಪಿಗೆ ಕೊಟ್ಟಿರಬಹುದು. ಆದರೆ, ಆಕೆಗೆ ಸುಳ್ಳು ಆಶ್ವಾಸನೆ ಕೊಟ್ಟು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲಾಗಿದೆ. ಅಕಾರದಲ್ಲಿರುವವರು ತಮ್ಮ ಪ್ರಭಾವ ಬಳಸಿ ಈ ರೀತಿ ಹೆಣ್ಣುಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ ಎಂದು ಹೇಳಿರುವ ಅವರು ಹೀಗಾಗಿ ಸಚಿವ ಜಾರಕಿಹೊಳಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿಯವರಿಗೆ ನೈತಿಕತೆ ಇಲ್ಲ. ಈ ಹಿಂದೆ ಅರವಿಂದ ಲಿಂಬಾವಳಿ ಅವರಿಗೆ ಸಂಬಂಧಪಟ್ಟ ಸಿಡಿ ಕೂಡ ಬೆಳಕಿಗೆ ಬಂದಿತ್ತು. ಆದರೆ, ಅವರು ಸಚಿವರಾಗಿದ್ದಾರೆ. ಆ ಪ್ರಕರಣದ ತನಿಖೆ ಏನಾಯಿತು ಎಂಬುದು ಗೊತ್ತಿಲ್ಲ. ಲಕ್ಷ್ಮಣಸವದಿ, ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ್ದಾರೆ. ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ ಬಿಜೆಪಿ ಉಸ್ತುವಾರಿಯ ಪ್ರಧಾನಕಾರ್ಯದರ್ಶಿ ಸಿಡಿ ಬಿಡುಗಡೆಯಾಗುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದರು. ಇಂತಹ ವಿಷಯಗಳನ್ನು ಪ್ರಧಾನಿ ಮೋದಿ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ರಮೇಶ ಜಾರಕಿಹೊಳಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತೇವೆ ಎಂದರು.
ಕೆಪಿಸಿಸಿ ವಕ್ತಾರ ಸಂಕೇತ್ ಏಣಗಿ ಮಾತನಾಡಿ, ಕ್ರಿಮಿನಲ್ ಕಾಯ್ದೆಯಲ್ಲಿರುವ ಮಾಹಿತಿ ಪ್ರಕಾರ ಸಂತ್ರಸ್ತೆಯೇ ಖುದ್ದಾಗಿ ಬಂದು ಪ್ರಕರಣ ದಾಖಲಿಸಬೇಕಿಲ್ಲ. ಅವರ ಪರವಾಗಿ ಬೇರೆಯವರೂ ಪ್ರಕರಣ ದಾಖಲಿಸಲು ಅವಕಾಶವಿದೆ. ಇಂತಹ ಪ್ರಕರಣಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ರಾಮ್‍ದಾಸ್-ಶ್ರೀನಿವಾಸ್‍ನಾಯಕ್ ಪ್ರಕರಣ, ಮನ್ಸೂರ್ ಆಲಿಖಾನ್ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪು ಕೂಡ ಇದನ್ನೇ ಉಲ್ಲೇಖಿಸಿದೆ. ಸಿಡಿಯನ್ನು ನಾವು ಪರಿಶೀಲಿಸಿದ್ದೇವೆ. ಅದರಲ್ಲಿ ರಮೇಶ್ ಜಾರಕಿಹೊಳಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿದೆವೆಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಕುಮಟಾ : ಅಘನಾಶಿನಿ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತ

ಆರೋಪಿಗಳು ತಾವು ತಪ್ಪು ಮಾಡಿಲ್ಲ ಎಂದು ಹೇಳುವುದು ಸಾಮಾನ್ಯ ಸಂಗತಿ. ಆದರೆ, ನ್ಯಾಯಾಲಯದಲ್ಲಿ ಆರೋಪಿ ಹೇಳಿಕೆಗಿಂತ ಸಂತ್ರಸ್ತೆ ವಾದಕ್ಕೆ ಮಾನ್ಯತೆ ಇದೆ. ಹೀಗಾಗಿ ಕೂಡಲೇ ತನಿಖೆ ನಡೆಸಬೇಕು.ರಮೇಶ್ ಜಾರಕಿಹೊಳಿ ಪ್ರಭಾವಿ ರಾಜಕಾರಣಿಯಾಗಿರುವುದರಿಂದ ಪೊಲೀಸರ ಮೇಲೆ ಪ್ರಭಾವ ಬೀರಬಹುದು. ಈ ಕಾರಣಗಳಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣವೇ ಸಚಿವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದರು.
ಕ್ರಮ ಕೈಗೊಳ್ಳದೇ ಇದ್ದರೆ ಶಾಸಕರು ಮತ್ತು ಸಚಿವರಾಗಲು ಈ ರೀತಿಯ ಪ್ರಕರಣಗಳು ಅರ್ಹತೆಗಳು ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರಮೇಶ್ ಜಾರಕಿಹೊಳಿ ಅವರನ್ನು ಅಧಿಕಾರದಲ್ಲಿ ಮುಂದುವರೆಸಿದರೆ ನಾವು ರಾಷ್ಟ್ರಪತಿ ಹಾಗೂ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement