ಸ್ಫೋಟಕ ವಸ್ತುಗಳ ಬಳಕೆ ಪರವಾನಿಗೆ ಪಡೆಯಲು ಇನ್ನಷ್ಟು ಕಾಲಾವಕಾಶ ಕೊಡಿ

ಬೆಂಗಳೂರು; ಕಲ್ಲು ಕ್ವಾರಿಯಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಸ್ಫೋಟಕ ವಸ್ತುಗಳ ಪರವಾನಿಗೆ ಪಡೆಯಲು ಗಣಿ ಸುರಕ್ಷತಾ ಮಹಾ ನಿದೇರ್ಶಕರು( ಡಿಜಿಎಂಎಸ್) ನೀಡಿರುವ ಸಮಯಾವಕಾಶವನ್ನು  ಇನ್ನಷ್ಟು ‌ ವಿಸ್ತರಣೆ ಮಾಡುವಂತೆ ಕೋರಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಮನವಿ ಮಾಡಿದೆ.
ಬುಧವಾರ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ನಿಯೋಗವು ವಿಕಾಸಸೌಧದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ  ಅವರನ್ನು ಭೇಟಿಯಾಗಿ ತುರ್ತಾಗಿ ಕೆಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಪತ್ರ ಸಲ್ಲಿಸಿತು.
ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಗುಡುಬಂಡೆ ತಾಲೂಕಿನಲ್ಲಿ ಇತ್ತೀಚೆಗೆ ‌ಸಂಭವಿಸಿದ ಘಟನೆಯ ಹಿನ್ನೆಲೆಯಲ್ಲಿ ಕಾನೂನುಬಾಹಿರವಾಗಿ ಸಂಗ್ರಹಿಸಿಕೊಂಡಿರುವ ಸ್ಫೋಟಕ ವಸ್ತುಗಳನ್ನು ತಕ್ಷಣವೇ ಹಿಂತಿರುಗಿಸುವಂತೆ ಸಚಿವ ‌ನಿರಾಣಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು.
ಇದರ ಬೆನ್ನಲ್ಲೇ ನಿಯೋಗವು ಸಚಿವರನ್ನು ಭೇಟಿಯಾಗಿ ಸ್ವಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ.ಕಂದಾಯ ಸಚಿವರಾದ ಆರ್.ಅಶೋಕ್ ಅವರೊಂದಿಗೆ ಚರ್ಚೆಸಿ ಸರ್ಕಾರಿ ಜಮೀನಿನಲ್ಲಿ ಸ್ಥಾಪಿಸಲಾಗಿರುವ ಕ್ಷಷರ್ ಘಟಕಗಳನ್ನು ಸರ್ಕಾರಿ ಆದೇಶದನ್ವಯ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡುವಂತೆ ನಿಯೋಗವು ಕೋರಿತು.
ರಾಜ್ಯಾದ್ಯಂತ ರಾಯಲ್ಟಿ ಮತ್ತು ಹೆಚ್ಚುವರಿ ವಾರ್ಷಿಕ ಪ್ರೀಮಿಯಂ ಪಾವತಿ (ಎಎಪಿಪಿ) ರದ್ದತಿಗೆ ಸಂಬಂಧಿಸಿದಂತೆ ಅಂತಿಮ ಬಳಕೆದಾರರು ಖನಿಜ ರವಾನೆ ಪರವಾನಗಿ (ಎಂಡಿಪಿ) ಪಡೆಯುವುದು ಕಡ್ಡಾಯಗೊಳಿಸುವಂತೆ  ಒತ್ತಾಯಿಸಿತು.
ದಂಡವಾಗಿ ಸಂಗ್ರಹಿಸಿದ ಐದು ಪಟ್ಟು ರಾಜಧನವನ್ನು ರದ್ದುಗೊಳಿಸುವಂತೆ ಕ್ವಾರಿ ಮತ್ತು ಕಲ್ಲು ಕ್ರಷರ್ ಮಾಲೀಕರು ಸಚಿವರಿಗೆ ಮನವಿ ಮಾಡಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವಿಧಿಸಿರುವ ಪರಿಸರ ಸೆಸ್ (ಹಸಿರು ಸೆಸ್) ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಂದೆ ಉಳಿಸದ / ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಧಿಸಿರುವ ಅತ್ಯಧಿಕ ಪರಿಸರ ಹೆಚ್ಚುವರಿ ಶುಲ್ಕ ರದ್ದುಪಡಿಸಬೇಕು ಎಂಬ ಬೇಡಿಕೆ ಮುಂದಿಟ್ಟರು.
ನಿಯೋಗದ ಮನವಿ ಸ್ವೀಕರಿಸಿದ ಮುರುಗೇಶ್ ನಿರಾಣಿ, ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು, ಕಾನೂನಿನ ವ್ಯಾಪ್ತಿಯಲ್ಲಿ ಈಡೇರಿಸಬಹುದಾದ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸುವ ಭರವಸೆ ನೀಡಿದರು.
ನಿಯೋಗದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ಗೌರವಾಧ್ಯಕ್ಷ ದತ್ತಾತ್ರಿ.ಎಸ್., ಅಧ್ಯಕ್ಷ ಸಂಜೀವ ಹಟ್ಟಿಹೊಳಿ, ಉಪಾಧ್ಯಕ್ಷರಾದ ಡಿ.ಸಿದ್ದರಾಜು, ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಹಾಜರಿದ್ದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement