ಒಂದು ರಾಷ್ಟ್ರ ಒಂದು ಚುನಾವಣೆ ಆರ್‌ಎಸ್‌ಎಸ್ ಅಜೆಂಡಾವಲ್ಲ : ಕಾಗೇರಿ

ಬೆಂಗಳೂರು: ಒಂದು ರಾಷ್ಟ್ರ ಒಂದು ಚುನಾವಣೆ ಆರ್‌ಎಸ್‌ಎಸ್ ಅಜೆಂಡಾವೂ ಅಲ್ಲ, ಪ್ರಧಾನಿ ಮೋದಿಯವರ ಅಜೆಂಡಾವೂ ಅಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ವಿಧಾನಸಭೆಯ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅವರು, ಸಂಸತ್ತಿನ ಸ್ಥಾಯಿ ಸಮಿತಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಹಿಂದೆಯೇ ಪ್ರಸ್ತಾಪಿಸಿತ್ತು. ಹಾಗೆಯೇ ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರು ಸಹ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಮಾತನಾಡಿದ್ದರು ಎಂದರು.
ಈ ಹಿಂದೆ ನವೆಂಬರ್‌ನಲ್ಲಿ ಗುಜರಾತ್‌ನ ಕೆವಾಡಿಯಾದಲ್ಲಿ ಎಲ್ಲ ರಾಜ್ಯಗಳ ವಿಧಾನಸಭಾಧ್ಯಕ್ಷರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿಯವರು ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಎಲ್ಲ ರಾಜ್ಯಗಳ ವಿಧಾನಸಭೆಯಲ್ಲೂ ಚರ್ಚೆಯಾಗಲಿ ಎಂದು ಹೇಳಿದ್ದರು. ಅದರಂತೆ ನಾನು ಗುಜರಾತ್‌ನಲ್ಲಿದ್ದಾಗಲೇ ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಎಲ್ಲರ ಜತೆಯೂ ಮಾತನಾಡಿ ಈ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದ್ದೆ. ಅದರಂತೆ ಡಿ. ೭ ರಂದು ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ತೀರ್ಮಾನಿಸಿದ್ದೆವು. ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಅಧಿವೇಶನ ಮೊಟಕಾದ್ದರಿಂದ ಚರ್ಚೆ ಸಾಧ್ಯವಾಗಲಿಲ್ಲ. ಈ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಲು ತೀರ್ಮಾನ ಕೈಗೊಂಡಿದ್ದೆ. ಅದಕ್ಕೆ ಎಲ್ಲರೂ ಒಪ್ಪಿದ್ದರು ಎಂದರು.
ಎಲ್ಲ ಪಕ್ಷಗಳು ಒಪ್ಪಿ ಈ ವಿಚಾರದ ಬಗ್ಗೆ ತಮ್ಮ ಕಚೇರಿಯಿಂದ ಹಲವು ಮಾಹಿತಿಗಳನ್ನು ತರಿಸಿಕೊಂಡಿದ್ದರು. ಚರ್ಚೆಯಲ್ಲಿ ಮಾತನಾಡುವವರ ಪಟ್ಟಿಯನ್ನು ಕಳುಹಿಸಿದ್ದರು. ಆದರೆ ಏಕಾಏಕಿ ಕಾಂಗ್ರೆಸ್‌ನವರು ಚರ್ಚೆಗೆ ವಿರೋಧ ವ್ಯಕ್ತಪಡಿಸಿದರು. ಇದು ಏಕೆ ಎಂಬುದೇ ನಮಗೆ ತಿಳಿಯುತ್ತಿಲ್ಲ ಎಂದರು.
ಇದು ವಿರೋಧ ಮಾಡುವಂತಹ ವಿಚಾರವೇ ಅಲ್ಲ. ಈ ವಿಚಾರದ ಬಗ್ಗೆ ಅಂತಿಮವಾಗಿ ಲೋಕಸಭೆಯಲ್ಲಿ ಚರ್ಚೆಯಾಗಿ ತೀರ್ಮಾನ ಕೈಗೊಳ್ಳಬೇಕು. ನಮ್ಮದೇನೂ ಇಲ್ಲ. ಕರ್ನಾಟಕದಿಂದ ಈ ವಿಚಾರದ ಬಗ್ಗೆ ಒಳ್ಳೆಯ ಚರ್ಚೆ ಮಾಡಿ ಒಳ್ಳೆಯ ಸಂದೇಶ ಕಳುಹಿಸಲು ಬಯಸಿದ್ದೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಕರೆಸಿ ಅವರ ಮನವೊಲಿಸುವ ಪ್ರಯತ್ನ ಮಾಡಿದೆ. ಆದರೆ ಅದು ಫಲ ಕೊಡಲಿಲ್ಲ. ಮುಂದೆ ಅವರ ಮನವೊಲಿಸಿ ಈ ಅಧಿವೇಶನದಲ್ಲೆ ಈ ಬಗ್ಗೆ ಚರ್ಚೆ ಮಾಡಲು ಪ್ರಯತ್ನ ನಡೆಸುತ್ತೇನೆ ವಿಧಾನಸಭೆಯಲ್ಲಿ ಚರ್ಚೆಯಾಗದಿದ್ದರೆ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಾದರೂ ಈ ವಿಚಾರದ ಕುರಿತು ಚರ್ಚೆ ಮಾಡುವ ಬಗ್ಗೆ ತೀರ್ಮಾನಿಸುವುದಾಗಿಯೂ ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement