೪ ಕೋಟಿ ಮೌಲ್ಯದ ಡ್ರಗ್ಸ್‌ ವಶ

ಬೆಂಗಳೂರು: ನಗರದ ಪೂರ್ವ ವಿಭಾಗದ ಪೊಲೀಸರು ೪ ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.
ಡ್ರಗ್ಸ್ ಸರಬರಾಜು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದ್ದು, ಮನೆ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೭ವಿದೇಶಿ ಪ್ರಜೆಗಳಿಂದ ೪೨.೫ ಕೆಜಿ ಗಾಂಜಾ, ೨೦೦ ಗ್ರಾಂ ಎಕ್ಸಟೆನ್ಸಿ ಮಾತ್ರೆಗಳು, ೨೭೧೯ ಗ್ರಾಂ ಕೊಕೇನ್, ಎಸ್‌ಎಲ್‌ಡಿ ಮಾತ್ರೆಗಳು ಸೇರಿದಂತೆ ೪ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಗಣ್ಯ ವ್ಯಕ್ತಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹ್ಯಾರಿಸನ್ ಅಗಭಂಟಿ (೨೫) ಹಾಗೂ ಜಾನ್ ನ್ಯಾನ್ಸೊ (೩೦)ನನ್ನು ಬಂಧಿಸಿ ೮೨ ಗ್ರಾಂ ಎಕ್ಸಟೆನ್ಸಿ ಮಾತ್ರೆ, ಕೊಕೇನ್, ಇನ್ನಿತರ ಡ್ರಗ್ಸ್, ೭ ಮೊಬೈಲ್, ೨ ಬೈಕ್ ಸೇರಿ ೨೦ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂಧಿತ ಆರೋಪಿಗಳ ಜತೆ ನೈಜೀರಿಯಾ ದೇಶದ ಪ್ರಜೆಗಳಾದ ಮೂಸಾ ಹಾಗೂ ಯಮಾನ್ಯುಯಲ್ ಎಂಬವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ವಿಚಾರಣೆಯಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಟಯೊಟೊ ಕಾರಿನಲ್ಲಿ ೨೦೦ ಗ್ರಾಂ ಕೊಕೇನ್, ಎಂಡಿಎಂಎ ಸೇರಿ ೩.೫ ಕೋಟಿ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಜತೆ ನಿಕಟ ಸಂಪರ್ಕ ಹೊಂದಿದ್ದ ಬಿಗ್‌ಬಾಸ್ ಸ್ಪರ್ಧಿ ಮಸ್ತಾನ್‌ಚಂದ್ರ ಹಾಗೂ ಕೇಶವ ಎಂಬುವರ ಮನೆಗಳ ಮೇಲೆ ಶೋಧ ನಡೆಸಲಾಗಿದೆ ಎಂದರು.
ವೀಸಾ ದುರ್ಬಳಕೆ: ಬಂಧಿತ ಆರೋಪಿಗಳಾದ ಜಾನ್‌ಫೆಡ್ಲರ್ ಹಾಗೂ ಜಾನ್ ನ್ಯಾನ್ಸೊ ವ್ಯಾಪಾರಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲಸಿ ಡ್ರಗ್ಸ್ ಸಾಗಾಣೆಯಲ್ಲಿ ತೊಡಗಿದ್ದರು ಎಂದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement