ಬಜೆಟ್‌ ಗಾತ್ರ ಕಳೆದ ಸಲಕ್ಕಿಂತ ದೊಡ್ಡದು:ನಿರೀಕ್ಷೆ ಹುಸಿ ಮಾಡಿದ ಬಿಎಸ್‌ವೈ..!!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಧಾನಸಭೆಯಲ್ಲಿ 2021-22ನೆ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಬಜೆಟ್‍ನ ಒಟ್ಟು ಗಾತ್ರ 2,43,734 ಕೋಟಿ ರೂ.ಗಳಾಗಿದೆ. ಇದು ಕಳೆದ ಸಲಕ್ಕಿಂತ ದೊಡ್ಡ ಗಾತ್ರದ ಬಜೆಟ್‌ ಆಗಿದ್ದು, ಕೊವಿಡ್‌ ಸಂದರ್ಭದಲ್ಲಿ ಬಜೆಟ್‌ ಗಾತ್ರ ಕಳೆದ ಸಲಕ್ಕಿಂತ ಸಣ್ಣ ಮಾಡಬಹುದು ಎಂಬ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ.

ಕಳೆದ ವರ್ಷ 2,33,137 ಕೋಟಿ ರೂ. ಗಾತ್ರದ ಬಜೆಟ್‍ನ್ನು ಮಂಡಿಸಿದ್ದರು. ಈ ಬಾರಿ ಅದಕ್ಕೆ 10,600 ಕೋಟಿ ರೂ.ಗಳಷ್ಟು ಹೆಚ್ಚುವರಿ ಸೇರ್ಪಡೆಯಾಗಿದೆ.

ಇದರಲ್ಲಿ 1,72,271 ರಾಜಸ್ವ ಜಮೆ ಹಾಗೂ 71,332 ಕೋಟಿ ಸಾಲ, 71,463 ಕೋಟಿ ಬಂಡವಾಳ ಜಮೆ ಎಂದು ಅಂದಾಜಿಸಲಾಗಿದೆ. 1,87,405 ಕೋಟಿ ರಾಜಸ್ವ ವೆಚ್ಚ, 44,237 ಕೋಟಿ ಬಂಡವಾಳ ವೆಚ್ಚ, 14,565 ಕೋಟಿ ಸಾಲ ಮರುಪಾವತಿ ಸೇರಿದಂತೆ ಒಟ್ಟು 2,46,207 ಕೋಟಿ ರೂ. ಬಜೆಟ್ ಖರ್ಚು ಅಂದಾಜು ಮಾಡಲಾಗಿದೆ.

15,134 ಕೋಟಿ ರೂ. ರಾಜಸ್ವ ಕೊರತೆ ಅಂದಾಜು ಮಾಲಾಗಿದ್ದು, ವಿತ್ತೀಯ ಕೊರತೆ 59,240 ಕೋಟಿ ರೂ.ಗಳೆಂದು ನಿರೀಕ್ಷಿಸಲಾಗಿದೆ. 2021-22ನೇ ಸಾಲಿನ ಕೊನೆಗೆ ರಾಜ್ಯದ ಸಾಲದ ಗಾತ್ರ 4,57,899 ಕೋಟಿ ರೂ.ಆಗಬಹುದು ಎನ್ನಲಾಗಿದ್ದು ರಾಜ್ಯದ ಒಟ್ಟು ಜಿಡಿಪಿಯ ಶೇ.26.9ರಷ್ಟು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದ ಸಾಲದ ಪ್ರಮಾಣ ಜಿಡಿಪಿಯಿಂದ ಶೇ.25ರಷ್ಟು ಮೀರಬಾರದು ಹಾಗೂ ವಿತ್ತೀಯ ಕೊರತೆ ಶೇ.2.5ರ ಒಳಗೆ ಇರಬೇಕು ಎಂಬ ನಿಯಮಗಳಿವೆ, ಕೊವಿಡ್‌ನ ವಿಶೇಷ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ವಿತ್ತೀಯ ಕೊರತೆಯ ಪ್ರಮಾಣ ಸಡಿಲ ಗೊಳಿಸಿದೆ ಅಷ್ಟೇ ಅಲ್ಲದೆ ಆರ್‌ಬಿಐ ನಿಂದ ಅಗತ್ಯವಿದ್ದರೆ ಸಾಲ ಪಡೆಯುವಂತೆಯೂ ರಾಜ್ಯ ಸರ್ಕಾರಗಳಿಗೆ ಹೇಳಿದೆ.
ನಷ್ಟ ಪರಿಹಾರ ಸೇರಿ ರಾಜ್ಯ ಸರ್ಕಾರವು ಜಿಎಸ್‍ಟಿ ಆದಾಯ ಪ್ರಮಾಣವನ್ನು 1,24 ,202 ಕೋಟಿ ರೂ.ಗಳೆಂದು ಅಂದಾಜು ಮಾಡಿದ್ದು, ತೆರಿಗೆಯೇತರ ರಾಜಸ್ವಗಳಿಂದ 8258 ಕೋಟಿ, ಕೇಂದ್ರ ತೆರಿಗೆಯಲ್ಲಿ ರಾಜ್ಯಕ್ಕೆ ಬರಬೇಕಾದ 24,273 ಕೋಟಿ ಹಾಗೂ 15,538ಕೋಟಿ ಸಹಾಯ ಧನ ನಿರೀಕ್ಷಿಸಿದೆ. ಮುಖ್ಯಮಂತ್ರಿ 71,332 ಕೋಟಿ ಸಾಲ ಪಡೆಯುವ ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕಡೂರು| ದುಷ್ಕರ್ಮಿಗಳಿಂದ ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

ಕಳೆದ ವರ್ಷ 2,33,134 ಕೋಟಿ ಆಯವ್ಯಯದಲ್ಲಿ 2,30,381 ಕೋಟಿ ರೂ. ಆದಾಯ ಜಮೆಯಾಗಿದೆ. ಕೋವಿಡ್ ಕಾರಣದಿಂದಾಗಿ ಸಂಪನ್ಮೂಲ ಕ್ರೂಢೀಕರಣ ಕಡಿಮೆಯಾಗಿರುವುದರಿಂದ 1,59,709 ಕೋಟಿ ರೂ. ರಾಜಸ್ವ ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ಜಿಎಸ್‍ಟಿಯ ಪಾಲು 1,17,782 ಕೋಟಿ ರೂ. ಸಂಗ್ರಹವಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement