
ಬೆಂಗಳೂರು: ಮಾನಹಾನಿ ಪ್ರಕರಣಗಳನ್ನು ಪ್ರಕಟಿಸದಂತೆ ಕೋರ್ಟ್ ಮೆಟ್ಟಿಲೇರಿರುವ ಆರು ಮಂದಿ ಪೈಕಿ ಒಬ್ಬರಾಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರಿಗೆ ಕಾಂಗ್ರೆಸ್ ಪ್ರಶ್ನೆ ಕೇಳದೆ ವಿಧಾನಪರಿಷತ್‍ನಲ್ಲಿ ಮುಜುಗರ ಉಂಟು ಮಾಡಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಆರ್.ಪ್ರಸನ್ನಕುಮಾರ್ ಮತ್ತು ಬಸವರಾಜ ಪಾಟೀಲ ಇಟಗಿ ಅವರ ಪ್ರಶ್ನೆಗಳು ಇದ್ದವು. ಆದರೆ, ಈ ಇಬ್ಬರು ಕೂಡ ನಾವು ಸಚಿವರಿಗೆ ಪ್ರಶ್ನೆ ಕೇಳದೆ ಬಹಿಷ್ಕರಿಸುತ್ತೇವೆ ಎಂದು ಹೇಳಿ ಸಚಿವರಿಗೆ ಮುಜುಗರ ಉಂಟುಮಾಡಿದರು.
ತಾವು ಯಾಕೆ ಸಚಿವರಿಗೆ ಪ್ರಶ್ನೆ ಕೇಳುವುದಿಲ್ಲ ಎಂದು ಎಂದು ವಿವರಣೆ ನೀಡಲು ಈ ಇಬ್ಬರು ಮುಂದಾದಾಗ ಇದಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪಿಸಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಇದು ಪ್ರಶ್ನೋತ್ತರ ಅವಧಿಯಾಗಿದ್ದರಿಂದ ಪ್ರಶ್ನೆ ಕೇಳುವುದು ಬಿಡುವುದು ನಿಮ್ಮ ಅಧಿಕಾರ. ನಾವು ಅದಕ್ಕೆ ಒತ್ತಾಯ ಮಾಡುವುದಿಲ್ಲ. ಆದರೆ ಪ್ರಶ್ನೋತ್ತರ ಅವಧಿಯಲ್ಲಿ ಬೇರೆ ರೀತಿಯ ಚರ್ಚೆಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಅದನ್ನು ಮೀರಿ ಆರ್.ಪ್ರಸನ್ನಕುಮಾರ್ ಅವರು ಕಾರಣಗಳನ್ನು ವಿವರಿಸಲು ಮುಂದಾದಾಗ ಇವರ ಮಾತುಗಳು ಕಡತಕ್ಕೆ ಹೋಗಬಾರದು ಎಂದು ಸಭಾಪತಿ ಸೂಚನೆ ನೀಡಿದರು. ಇದಕ್ಕೆ ಕಾಂಗ್ರೆಸ್‍ನ ಎಂ.ನಾರಾಯಣಸ್ವಾಮಿ, ಬಿ.ಕೆ.ಹರಿಪ್ರಸಾದ್, ಸಿ.ಎಂ.ಇಬ್ರಾಹಿಂ ಆಕ್ಷೇಪಿಸಿದರು. ಸದಸ್ಯರು ಅಸಂಸದೀಯವಾಗಿ ಮಾತನಾಡಿಲ್ಲ. ಹೀಗಾಗಿ ಅದನ್ನು ಕಡತದಿಂದ ತೆಗೆಯುವ ಅಗತ್ಯವಿಲ್ಲ ಎಂದು ವಾದಿಸಿದರು.
ಇದನ್ನು ಒಪ್ಪದ ಸಭಾಪತಿಯವರು ಪ್ರಶ್ನೆ ಕೇಳಿ ಅಥವಾ ಬಿಡಿ, ಆ ವಿಚಾರಗಳು ಮಾತ್ರ ಕಡತಕ್ಕೆ ಹೋಗುತ್ತದೆ. ಉಳಿದಂತೆ ಯಾವುದೇ ಚರ್ಚೆಗಳು ಕಡತದಲ್ಲಿ ದಾಖಲಾಗುವುದಿಲ್ಲ ಎಂದು ಹೇಳಿದರು.
ನಂತರ ಬಸವರಾಜ ಪಾಟೀಲ ಇಟಗಿ ತಮ್ಮ ಪ್ರಶ್ನೆಯ ಸರದಿ ಬಂದಾಗಲೂ ಕಾರಣಗಳನ್ನು ವಿವರಿಸಲು ಮುಂದಾದಾಗ ಮತ್ತೆ ಸಭಾಪತಿಯವರು ಅವಕಾಶ ನಿರಾಕರಿಸಿದರು. ಆಗ ಇಟಗಿ ಅವರು ತಮಗೆ ಕಾರಣ ಹೇಳಲು ಅವಕಾಶ ನೀಡಬೇಕು. ಸಭಾಪತಿ ಸದಸ್ಯರಿಗೆ ಪ್ರಶ್ನೋತ್ತರದಲ್ಲಿ ಹೆಚ್ಚು ಮಾತನಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಂತದಲ್ಲಿ ಎಂ.ನಾರಾಯಣಸ್ವಾಮಿ ಮತ್ತು ಬಸವರಾಜ್ ಇಟಗಿ ಧರಣಿಗೆ ಮುಂದಾದರು. ಆಗ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸಮಾಧಾನಪಡಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ