ಬೆಂಗಳೂರು; ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರು ಸದನದಲ್ಲಿ ಅನುಚಿತವಾಗಿ ವರ್ತನೆ ಮಾಡಿದ ಪ್ರಕರಣ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿ ಕಾರಣವಾಯಿತು.
ಸರ್ಕಾರದ ನಡೆ ಖಂಡಿಸಿ ಪ್ರತಿಪಕ್ಷ ಕಾಂಗ್ರೆಸ್‍ನ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರಶ್ನೋತ್ತರ ಅವ ಮುಗಿದ ನಂತರ ಶಾಸಕ ಅರಗ ಜ್ಞಾನೇಂದ್ರ ಹಕ್ಕುಚ್ಯುತಿ ಮಂಡಿಸಿ ವಿಷಯ ಪ್ರಸ್ತಾವನೆ ಮಾಡಲು ಮುಂದಾದರು. ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಗದ್ದಲದ ನಡುವೆಯೇ ಅರಗ ಜ್ಞಾನೇಂದ್ರ, ಸಂಗಮೇಶ್ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದು ಸರಿಯಲ್ಲ. ಎಲ್ಲರೂ ಸದನದ ನಿಯಮಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಅದರಲ್ಲೂ ಶಾಸಕರೊಬ್ಬರು ಸದನದ ಬಾವಿಗಿಳಿದು ಅಂಗಿ ಬಿಚ್ಚಿ ನಡೆದುಕೊಂಡಿದ್ದು ಸರಿಯಲ್ಲ. ಅವರ ವರ್ತನೆ ಅಶ್ಲೀಲವಾಗಿದೆ ಎಂದು ಆರೋಪಿಸಿದರು. ಅರಗಜ್ಞಾನೇಂದ್ರ ಅವರು ಅಶ್ಲೀಲ ಎಂಬ ಪದ ಬಳಸಿದ್ದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿದರು.
ಸಿಡಿ ಪ್ರಕರಣವನ್ನೇ ಮಾಡಿರುವ ನಿಮಗೆ ಈಗ ಅಶ್ಲೀಲ ಪದ ಬಳಸಲು ನೈತಿಕತೆ ಇದೆಯೇ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಂಗಮೇಶ ಅವರನ್ನು ಸದನದಿಂದ ಅಮಾನತು ಮಾಡಿದ್ದೀರಿ. ಅವರು ಸದನದಲ್ಲಿ ಇಲ್ಲದಿದ್ದಾಗ ಹಕ್ಕು ಚ್ಯುತಿ ಮಂಡಿಸುವುದು ಎಷ್ಟರ ಮಟ್ಟಿಗೆ ಸರಿ. ನಿಮ್ಮದೇ ಪಕ್ಷದ ಶಾಸಕ ಗೂಳಿಹಟ್ಟಿ ಶೇಖರ್ ಬಟ್ಟೆ ಬಿಚ್ಚಿ ರಂಪಾಟ ಮಾಡಿದ್ದರು. ಆಗ ಅವರ ವಿರುದ್ಧ ಏನುಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಅಮಾನತುಗೊಂಡಿದ್ದ ಸದಸ್ಯರೊಬ್ಬರು ಸದನದಲ್ಲಿ ಇಲ್ಲದಿರುವಾಗ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದು ಸದನದ ನಿಯಮಕ್ಕೆ ವಿರುದ್ಧವಾದದ್ದು, ಹಾಗಾಗಿ ವಿಷಯ ಪ್ರಸ್ತಾವನೆಗೆ ಅವಕಾಶ ಕೊಡಬೇಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಆಗ ಕಾಗೇರಿ ಅವರು ನಾನು ಶಾಸಕ ಅರಗ ಜ್ಞಾನೇಂದ್ರ ಅವರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ಕೊಟ್ಟಿದ್ದೇನೆ. ಅವರು ಏನು ಮಾತನಾಡುತ್ತಾರೆ ಎಂಬುದನ್ನು ಕೇಳಿಸಿಕೊಳ್ಳಿ. ಪರ-ವಿರೋಧ ಚರ್ಚೆ ಇದ್ದೇ ಇರುತ್ತದೆ. ಸಮಯ ಬಂದಾಗ ನೀವು ಕೂಡ ಅಭಿಪ್ರಾಯ ಹೇಳಲು ಅವಕಾಶವಿದೆ ಎಂದರು.
ನಿಯಮ 140ರ ಪ್ರಕಾರ ಸದಸ್ಯರು ಸದನದಲ್ಲಿ ಇಲ್ಲದಿದ್ದಾಗಲೂ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಬಹುದು. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ನಾನು ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಮಧ್ಯ ಪ್ರವೇಶಿಸಿದ ಸಚಿವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸದಸ್ಯರೊಬ್ಬರು ಸದನದಲ್ಲಿ ಅಂಗಿ ಬಿಚ್ಚಿ ನಡೆದುಕೊಂಡಿದ್ದು ಅತ್ಯಂತ ದುರದೃಷ್ಟಕರ. ಅವರು ಅಮಾನತುಗೊಂಡ ನಂತರವೂ ಪೀಠಕ್ಕೆ ಗೌರವ ಕೊಡದೆ ಅಗೌರವದಿಂದ ನಡೆದುಕೊಂಡಿದ್ದಾರೆ.
ಈ ರೀತಿ ದುರ್ವತನೆ ತೋರಿದ್ದು ಸರಿಯಲ್ಲ. ಅಂತಹ ಸದಸ್ಯರು ಮಾಡಿದ್ದು ಸರಿ ಎಂದು ಪ್ರತಿಪಕ್ಷದ ಸದಸ್ಯರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದರು.
ಮಾತು ಮುಂದುವರೆಸಿದಾಗ ಗದ್ದಲ ನಡೆದು ಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ನಿಮ್ಮ ಕಾಮೆಂಟ್ ಬರೆಯಿರಿ