

ಶಿವಮೊಗ್ಗ: ಶಿವಮೊಗ್ಗದ ವಿಮಾನ ನಿಲ್ದಾಣದ ಬಳಿ ಭಾರಿ ಪ್ರಮಾಣದ ಸ್ಫೋಟಕ ತುಂಬಿದ್ದ ಎರಡು ವಾಹನಗಳು ಪತ್ತೆಯಾಗಿವೆ. ಇವುಗಳಲ್ಲಿ 904 ಕೆ.ಜಿ. ಜಿಲೆಟಿನ್ ಕಡ್ಡಿ, 3,267 ಡಿಟೊನೇಟರ್‌ಗಳು ಸೇರಿದಂತೆ ಹಲವಾರು ಇತರ ವಸ್ತುಗಳು ಪತ್ತೆಯಾಗಿವೆ.
ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಟಾಟಾ 407 ವಾಹನದಲ್ಲಿ 36 ಬಾಕ್ಸ್ ಜಿಲೆಟಿನ್ ಕಡ್ಡಿಗಳು, ಪಿಕ್ ಅಪ್ ವಾಹನದಲ್ಲಿ 3,267 ಎಲೆಕ್ಟ್ರಾನಿಕ್ ಡಿಟೊನೇಟರ್‌ಗಳು ಸೇರಿದಧಂತೆ ಇತರೆ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜನವರಿ ತಿಂಗಳಿನಲ್ಲಿ ಶಿವಮೊಗ್ಗ ತಾಲೂಕಿನ ಹುಣಸೋಡಿನಲ್ಲಿರುವ ಎಸ್. ಎಸ್. ಕ್ರಷರ್‌ನಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು ಐವರು ಮೃತಪಟ್ಟ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಸರಿಸುಮಾರು ಒಂದು ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಾಗವಲ್ಲಿ ಗ್ರಾಮದಲ್ಲಿ ಜಿಲೆಟ್ ಸ್ಫೋಟಗೊಂಡು ಆರು ಜನ ಮೃತಪಟ್ಟಿದ್ದರು. ಇದು ಕೂಡ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಅನಂತರ ಸರ್ಕಾರ ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿತ್ತು ಹಾಗೂ ಅಕ್ರಮ ಸಾಗಾಟದ ಬಗ್ಗೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿತ್ತು. ಈಗ ಶಿವಮೊಗ್ಗ ವಿಮಾನ ನಿಲ್ದಾಣದ ಬಳಿಸ್ಫೋಟಕಗಳು ಮತ್ತೆ ಪತ್ತೆಯಾಗಿವೆ.



ನಿಮ್ಮ ಕಾಮೆಂಟ್ ಬರೆಯಿರಿ