ಭೈರಪ್ಪ ಶ್ರೀರಾಮನ ಬಗ್ಗೆ ಮಾತಾಡಿದ್ರೆ ಸುಮ್ಮನಿರ್ತಿರಿ, ಅದೇ ಭಗವಾನ್‌ ಮಾತಾಡಿದ್ರೆ ಮುಖಕ್ಕೆ ಮಸಿ ಹಚ್ತಿರಿ, ಈ ಧೋರಣೆ ಯಾಕೆ?

ಬೆಂಗಳೂರು: ರಾಮ, ಕೃಷ್ಣರ ಬಗ್ಗೆ ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿದರೆ ನೀವು ಸುಮ್ಮನಿರುತ್ತೀರಿ, ಅದೇ ಭಗವಾನ್ ಮಾತನಾಡಿದರೆ ಅವರ ಮುಖಕ್ಕೆ ಮಸಿ ಬಳಿಯುತ್ತೀರಿ. ಇಂತಹ ಧೋರಣೆ ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ.
ಸೋಮವಾರ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ಸಾಹಿತಿ ಎಸ್.ಎಲ್ ಭೈರಪ್ಪ ಅವರು ರಾಮ ದೇವರಲ್ಲ, ಕೇವಲ ರಾಜ ಎಂದು ಹೇಳಿದ್ದಾರೆ. ದ್ರೌಪದಿ ಬಗ್ಗೆ ಬರೆಯುತ್ತಾರೆ. ಆದರೆ ಅವರು ನಿಮ್ಮವರು ಎಂದು ನೀವು ಸಮುನ್ನಿರುತ್ತೀರಿ. ಅದೇ ಮಾತನ್ನು ಪ್ರೊ. ಭಗವಾನ್ ಹೇಳಿದರೆ ಅವರ ಮುಖಕ್ಕೆ ಮಸಿ ಬಳಿಯುತ್ತಾರೆ. ಇಂತಹ ದ್ವಂದ್ವ ನೀತಿ ಏಕೆ ಎಂದು ಪ್ರಶ್ನಿಸಿದ ಅವರು, ಸಂಘ ಪರಿವಾರದವರು ಮಾತನಾಡಿದರೆ ಸುಮ್ಮನಿದ್ದು ಬೇರೆಯವರು ಮಾತನಾಡಿದರೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಭೈರಪ್ಪ ‘ಪರ್ವ’ ಕಾದಂಬರಿಯನ್ನು ನಾಟಕ ಮಾಡಲು 1 ಕೋಟಿ ರೂ. ಕೊಡಲಾಗುತ್ತಿದೆ. ನಿಮ್ಮ ಸಾಹಿತಿಗೆ ನೀವೇ ಪ್ರಶಸ್ತಿ ಕೊಡಿಸಿ ನಾಟಕಕ್ಕೂ ಹಣ ಕೊಟ್ಟಿದ್ದೀರಿ ಎಂದು ಆಕ್ಷೇಪಿಸಿದರು.
ಆಗ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿ, ಭೈರಪ್ಪ ಅವರ ನಾಟಕ ‌ಸರಿಯಿಲ್ಲ‌ ಎನ್ನುವ ಹಕ್ಕು ನಿಮಗಿಲ್ಲ. ಭೈರಪ್ಪ ಜನಮಾನ್ಯರ ಬಗ್ಗೆ ಬರೆದಿದ್ದಾರೆ. ಅವರ ಕಾದಂಬರಿ, ಬರಹಕ್ಕೆ ಪ್ರಶಸ್ತಿ ಸಿಕ್ಕಿದೆ. ಅವರ ಒಂದು ಶಬ್ದ ಹಿಡಿದು ಈ ರೀತಿ ಹೇಳಿದರೆ ಸರಿಯಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಆಗ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ರಚಿತ ಮಲೆಗಳಲ್ಲಿ ಮದುಮಗಳು ನಾಟಕಕ್ಕೆ ಯಾವ ಸರ್ಕಾರವೂ ನೆರವಿಗೆ ಬರಲಿಲ್ಲ. ಈಗ‌ ಪರ್ವಕ್ಕೆ ಸಹಕಾರ ಏಕೆ? ಇದು ಸರಿಯಲ್ಲ, ಎಷ್ಟೆಲ್ಲಾ ಬರಹಗಾರರು, ಕಾದಂಬರಿಕಾರರಿದ್ದಾರೆ. ಆದರೆ ಭೈರಪ್ಪ ಅವರ ನಾಟಕಕ್ಕೆ ಮಾತ್ರ ಅನುದಾನ ಕೊಟ್ಟಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಸಾಹಿತಿಗಳಲ್ಲೇ ಏಕೆ ತಾರತಮ್ಯ ಏಕೆ? ಇಂತಹ ತಾರತಮ್ಯ ನಿಲ್ಲಬೇಕು ಎಂದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement