ತಮಿಳುನಾಡು: ಮತಯಾಚನೆಗೆ ಬಂದ ಶಾಸಕನಿಗೆ ಕಳಪೆ ಅಕ್ಕಿ ಆರತಿ !

ಚೆನ್ನೈ: ವಿಧಾನಸಭಾ ಚುನಾವಣೆಗಾಗಿ ಮತಯಾಚನೆ ಮಾಡಲು ಬಂದ ಎಐಎಡಿಎಂಕೆ ಶಾಸಕನಿಗೆ ಗ್ರಾಮದ ಮಹಿಳೆಯರು ಪಡಿತರ ಕೇಂದ್ರಗಳಲ್ಲಿ ನೀಡುವ ಕಳಪೆ ಅಕ್ಕಿಯಿಂದ ಆರತಿ ಬೆಳಗಿದ ಘಟನೆ ಮಧುರೈ ಜಿಲ್ಲೆಯ ಶೋಲವಂದನ್‌ ವಿಧಾನಸಭಾ ಕ್ಷೇತ್ರದ ತಾಂಡಲೈ ಗ್ರಾಮದಲ್ಲಿ ನಡೆದಿದೆ.
ಎಐಎಡಿಎಂಕೆ ಶಾಸಕ ಕೆ. ಮಾಣಿಕಂ ಮತಯಾಚನೆಗೆ ಬಂದ ಸಂದರ್ಭದಲ್ಲಿ ೫೦ಕ್ಕೂ ಹೆಚ್ಚು ಮಹಿಳೆಯರು ಸಾಲಾಗಿ ತಟ್ಟೆಗಳಲ್ಲಿ ಕಳಪೆ ದರ್ಜೆಯ ಅಕ್ಕಿಯನ್ನು ಹಾಕಿಕೊಂಡು ವಿಶೇಷ ರೀತಿಯಲ್ಲಿ ಆರತಿ ಬೆಳಗಿ ಸ್ವಾಗತಿಸಿದರು. ಅನಿರೀಕ್ಷಿತ ಘಟನೆಯಿಂದ ಮಾಣಿಕಂ ಮುಜುಗುರಕ್ಕೀಡಾಗಬೇಕಾಯಿತು. ಪಡಿತರ ಕೇಂದ್ರಗಳಲ್ಲಿ ಮುಗ್ಗಲು ಬಂದ ಕಳಪೆ ಅಕ್ಕಿ ನೀಡಲಾಗುತ್ತದೆ. ನಾವು ಕೂಡ ಮನುಷ್ಯರು. ಇಂಥ ಕಳಪೆ ಅಕ್ಕಿಯನ್ನು ಹೇಗೆ ತಿನ್ನಬೇಕು ನೀವೇ ಹೇಳಿ ಎಂದು ಆಗ್ರಹಿಸಿದರು.
ಪಕ್ಷದ ಮುಖಂಡರು ಹಾಗೂ ಶಾಸಕರು ಮಹಿಳೆಯರನ್ನು ಸಮಾಧಾನಪಡಿಸಲು ಯತ್ನಿಸಿದರು. ನಾವು ನಿಮ್ಮ ಪಕ್ಷಕ್ಕೆ ಮತ ಹಾಕುತ್ತಿದ್ದೇವೆ ಆದರೆ ಅದು ನಮಗಾಗಿ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು. ಐದು ವರ್ಷಗಳ ನಂತರ ನೀವು ಇಲ್ಲಿಗೆ ಬಂದಿದ್ದೀರಿ. ಇಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಇಲ್ಲ. ಸರಿಯಾದ ರಸ್ತೆಗಳಿಲ್ಲ. ಕಾರುಗಳು ಸಂಚರಿಸುವುದಕ್ಕೂ ಅಯೋಗ್ಯ ರಸ್ತೆಗಳು ಇಲ್ಲಿವೆ ಎಂದು ದೂರಿದರು. ಆಗ ಮುಜುಗರಕ್ಕೊಳಗಾದ ಶಾಸಕರು ಗ್ರಾಮಸ್ಥರನ್ನು ಉದ್ದೇಶಿಸಿ ತರಾತುರಿಯಲ್ಲಿ ಮಾತನಾಡಿ, ಸಮಸ್ಯೆ ಈಗ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿ ನಿರ್ಗಮಿಸಿದರು.
ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ಮತಎಣಿಕೆ ಮೇ 2 ರಂದು ನಡೆಯುವುದು.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement