ಕಾರವಾರ: “ಕೇವಲ ಮಸೀದಿಗಳಲ್ಲಿ ಮೈಕ್‌ಗಳಿಗೆ ನಿರ್ಬಂಧಿಸುವುದು ಮಾತ್ರವಲ್ಲ, ಸಾಮಾನ್ಯ ನಾಗರಿಕರ ಶಾಂತಿ, ಸೌಹಾರ್ದಕ್ಕೆ ತೊಂದರೆಯಾಗುವ ಯಾವುದೇ ಶಬ್ದ ಮಾಲಿನ್ಯವಿದ್ದರೂ ತಡೆಯಬೇಕು. ಚರ್ಚ್‌ಗಳಿಗೂ ಇದನ್ನು ಅನ್ವಯಿಸಬೇಕು” ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಕಾರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಕ್ಫ್ ಬೋರ್ಡ್ ಕರ್ನಾಟಕದಲ್ಲಿ ನೋಂದಾವಣೆಗೊಂಡಿರುವ 32 ಸಾವಿರ ಮಸೀದಿಗಳಿಗೆ ಪತ್ರ ಬರೆದು ಮೈಕ್ ಅನ್ನು ರಾತ್ರಿ 10ರಿಂದ 6 ಗಂಟೆ ವರೆಗೆ ಬಳಸಬಾರದು ಹಾಗೂ ಬಳಕೆಯ ವೇಳೆ ಅದರ ಶಬ್ದದಿಂದ ಯಾರಿಗೂ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ” ಇದು ಸ್ವಾಗತಾರ್ಹ ಎಂದರು.
“ಮಸೀದಿಗಳ ಮೈಕ್‌ನಿಂದ ಸಾರ್ವಜನಿಕರಿಗೆ ಎಷ್ಟು ಕಿರಿಕಿರಿಯಾಗುತ್ತಿದೆ ಎನ್ನುವುದು ವಕ್ಫ್ ಬೋರ್ಡ್‌ಗೆ ಈಗಲಾದರೂ ತಿಳಿದು ಎಚ್ಚರಿಕೆ ವಹಿಸುತ್ತಿರುವುದು ಅಭಿನಂದನಾರ್ಹ. ರಾತ್ರಿ 10 ರಿಂದ ಬೆಳಿಗ್ಗೆ 6ರ ವರೆಗೆ ಮೈಕ್‌ಗಳನ್ನು ಬಳಸಬಾರದು ಹಾಗೂ ಮಸೀದಿಗಳಲ್ಲಿ ಮೈಕ್‌ಗಳನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟ್ 22 ವರ್ಷಗಳ ಹಿಂದೆಯೇ ಆದೇಶಿಸಿದೆ. ಆದರೆ ಇದು ಈವರೆಗೂ ಜಾರಿಯಾಗಿಲ್ಲ. ಕೋರ್ಟ್ ಆದೇಶವನ್ನೇ ಉಲ್ಲಂಘಿಸಿ ಮೈಕ್‌ಗಳನ್ನು ಬಳಸುತ್ತಿರುವುದನ್ನು ನೋಡಿದರೆ ಈಗ ವಕ್ಫ್ ಬೋರ್ಡ್ ಸೂಚನೆಯನ್ನು ಪಾಲಿಸುತ್ತಾರೆ ಎಂಬ ವಿಶ್ವಾಸ ನಮಗಿಲ್ಲ” ಎಂದು ಹೇಳಿದರು.
ಮಸೀದಿಗಳ ಮೈಕ್‌ಗಳಿಗೆ ಸಂಬಂಧಿಸಿ ಕೋರ್ಟ್ ಆದೇಶ ಉಲ್ಲಂಘನೆಯಾಗುತ್ತಿದೆ ಎಂದು ಶ್ರೀರಾಮ ಸೇನಾ ಸಂಘಟನೆ ಏಪ್ರಿಲ್ ಕೊನೆಯ ವಾರದಲ್ಲಿ ಕರ್ನಾಟಕದ ಸಾವಿರ ಸ್ಥಳಗಳಲ್ಲಿ ಏಕಕಾಲದಲ್ಲಿ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸಲಿದೆ ಎಂದು ತಿಳಿಸಿದರು.
ಪಟಾಕಿ ಹೊಡೆಯುವುದು ವರ್ಷಕ್ಕೆ ಒಂದೇ ಸಾರಿ. ಇದರಿಂದ ಮಾಲಿನ್ಯ ಆಗುತ್ತದೆ ಎಂಬ ಬಗ್ಗೆ ಒಂದೇ ಒಂದು ದೂರು ಇನ್ನೂ ಬಂದಿಲ್ಲ. ಬುದ್ಧಿಜೀವಿಗಳು, ಎಡಪಂಥೀಯ ವಿಚಾರಧಾರೆಗಳನ್ನು ಹೊಂದಿರುವವರು ಹಿಂದೂ ಹಕ್ಕುಗಳನ್ನು ಮಾತ್ರ ಗುರಿಯಿಟ್ಟು ವ್ಯವಸ್ಥಿತವಾಗಿ ಇದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ವರ್ಷಕ್ಕೆ ಒಂದು ಸಾರಿ ಪಟಾಕಿ ಹೊಡೆಯುವುದರಿಂದ ಮಾಲಿನ್ಯ ಆಗುತ್ತದೆ, ಆರೋಗ್ಯ ಸಮಸ್ಯೆಗಳಾಗುತ್ತವೆ ಎಂಬ ಬಗ್ಗೆ ಒಂದೇ ಒಂದು ದೂರು ಇಲ್ಲ. ವರ್ಷದ ಇಡೀ ದಿನ ಐದು ಬಾರಿ ಮಸೀದಿಗಳಲ್ಲಿ ಅಜಾನ್ ಕೂಗುತ್ತಿರುವ ಬಗ್ಗೆ ಸಾವಿರ ಸಾವಿರ ದೂರುಗಳು ಬಂದಿವೆ” ಎಂದು ಹೇಳಿದರು.
ಒಂದು ವೇಳೆ ಪಟಾಕಿಯಿಂದಲೂ ಸಮಸ್ಯೆ ಆಗುತ್ತದೆಯೆಂದಾದರೆ ದೂರುಗಳನ್ನು ನೀಡಿ, ಚರ್ಚೆಗಳು ಕೂಡ ನಡೆಯಲಿ. ಪಟಾಕಿ ಹೊಡೆಯುವುದು ತಪ್ಪು ಎಂದಾದರೆ ಅದನ್ನು ಕೂಡ ನಿಲ್ಲಿಸಿ. ಇಷ್ಟೇ ಅಲ್ಲದೇ, ದೇವಾಲಯಗಳಲ್ಲಿ ಮೈಕ್‌ಗಳಲ್ಲಿ ಸಂಗೀತ, ಭಜನೆಗಳನ್ನು ಹಾಕುವುದರಿಂದ ಸಾಮಾನ್ಯ ಜನರಿಗೆ ತೊಂದರೆಯಾದರೂ ನಿಲ್ಲಿಸಿ” ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ