ಗ್ರಾಮ ವಾಸ್ತವ್ಯದಲ್ಲಿ ಜನರ ಮನೆ ಬಾಗಿಲಿಗೆ ಬಂದ ಸರ್ಕಾರದಿಂದ ಸಮಸ್ಯೆಗಳಿಗೆ ಪರಿಹಾರ: ಸಚಿವ ಅಶೋಕ

ಹುಬ್ಬಳ್ಳಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ದಾಖಲಿಸುವ ಮತ್ತು ಇತ್ಯರ್ಥಪಡಿಸಿದ ಕುರಿತು ಮಾಹಿತಿ ದಾಖಲಿಸುವ ಧಾರವಾಡ ಜಿಲ್ಲಾಡಳಿತದ ಕ್ರಮ ಮಾದರಿಯಾಗಿದ್ದು, ಇದನ್ನು ಇತರ ಜಿಲ್ಲೆಗಳಿಗೆ ಜಾರಿಗೊಳಿಸಿ ಜಿಲ್ಲಾ ಆಡಳಿತದ ಈ ಕಾರ್ಯವನ್ನು ರಾಜ್ಯ ಆಡಳಿತದೊಂದಿಗೆ ಜೋಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಅವರು ಶನಿವಾರ ಮಧ್ಯಾಹ್ನ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಎರಡನೇ ಗ್ರಾಮ ವಾಸ್ತವ್ಯ ನಿಮಿತ್ತ ಧಾರವಾಡ ಜಿಲ್ಲಾಡಳಿತ ಮತ್ತು ಹುಬ್ಬಳ್ಳಿ ತಾಲೂಕಾ ಆಡಳಿತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆ ಕಾರ್ಯ, ಸೇವೆಗಳನ್ನು ಪ್ರಮುಖವಾಗಿಸಿಕೊಂಡು ಗ್ರಾಮೀಣ, ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ರಾಜ್ಯ ಸರ್ಕರದ ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಎಂಬ ವಿಶಿಷ್ಟ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಕಷ್ಟ ಪರಿಹರಿಸುವ ಕಾರ್ಯ ಯಶಸ್ವಿಯಾಗಿ ಮುಂದುವರೆದಿದೆ ಎಂದು ಅವರು ಹೇಳಿದರು.
ಕಂದಾಯ ಇಲಾಖೆಯು ಜನರೊಂದಿಗೆ ಇರುವ ಇಲಾಖೆಯಾಗಿದ್ದು, ಜನರ ಕಷ್ಟ ನೋವುಗಳನ್ನು ಅವರಿರುವ ಸ್ಥಳದಲ್ಲಿಯೇ ಪರಿಹಾರ ನೀಡಲು ನಮ್ಮ ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪ್ರತಿ ತಿಂಗಳು 3ನೇ ಶನಿವಾರ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮ ಜಾರಿಗೊಳಿಸಿದೆ. ಈ ಕಾರ್ಯಕ್ರಮದಲ್ಲಿ ಭೇಟಿ ನೀಡುವ ಒಂದು ವಾರದ ಮೊದಲೇ ಎಲ್ಲ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಿ ಗ್ರಾಮ ವಾಸ್ತವ್ಯ ದಿನ ಅರ್ಜಿ ಪರಿಹಾರ ಕಂಡುಕೊಳ್ಳುವುದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಛಬ್ಬಿ ಹೋಬಳಿಗೆ ಅನುಕೂಲವಾಗುವಂತೆ ಹೊಸ ನಾಡಕಚೇರಿ ನಿರ್ಮಾಣ ಮಾಡಲು ಸರ್ಕಾರದಿಂದ .20.00 ಲಕ್ಷ ರು. ಅನುದಾನದಡಿ ಹೊಸ ನಾಡ ಕಚೇರಿ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಲಾಗಿದೆ.   ತಾಲೂಕ ಛಬ್ಬಿ ಹೋಬಳಿಗೆ ಸಂಬಂಧಿಸಿದಂತೆ ಶೆರೆವಾಡ ಗ್ರಾಮದಲ್ಲಿ 6ಎಕರೆ-30ಗುಂಟೆ ಜಮೀನನ್ನು ಡಾ.ಬಿ.ಆರ್. ಅಂಬೇಡ್ಕರ ಬಾಲಕಿಯರ ವಸತಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡಲಾಗಿದೆ. ಸದರಿ ಜಮೀನಿನಲ್ಲಿ ರೂ.24 ಕೋಟಿ ಅನುದಾನದಲ್ಲಿ ಬಾಲಕರ, ಬಾಲಕಿಯರ ವಸತಿ ಶಾಲೆ ಮತ್ತು ಬೋಧಕರ, ಬೋಧಕೇತರ ಸಿಬ್ಬಂದಿ ವಸತಿಗೃಹ ನಿರ್ಮಾಣ ಮಾಡಲಾಗುತ್ತಿದೆ.   ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಅವಶ್ಯವಿರುವುದರಿಂದ, ಸ್ಮಶಾನಕ್ಕಾಗಿ ಖಾಸಗಿ ಭೂಮಿ ಖರೀದಿಗೆ ರಾಜ್ಯ ಸರ್ಕಾರದಿಂದ 2.67 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.     ಛಬ್ಬಿ ಗ್ರಾಮದಲ್ಲಿ ಆಧಾರ್ ದಾಖಲಾತಿಗೆ ತಾತ್ಕಾಲಿಕವಾಗಿ 2 ಆಧಾರ್ ಕಿಟ್‍ಗಳನ್ನು ಅಳವಡಿಸಲಾಗಿದೆ. ಈವರೆಗೂ 213 ಜನಕ್ಕೆ ಈ ಸೌಲಭ್ಯವನ್ನು ಒದಗಿಸಲಾಗಿದೆ.  ಒಟ್ಟು 15 ಫಲಾನುಭವಿಗಳಿಗೆ ಈ ದಿನ ವಿತರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.  ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ‘ಮನೆ ಬಾಗಿಲಿಗೆ ಮಾಶಾಸನ’ ಪಿಂಚಣಿ ಯೋಜನೆಗಳಡಿ ನವೋದಯ ತಂತ್ರಾಂಶವನ್ನು ಹೊಸದಾಗಿ ಪರಿಚಯಿಸಿದ್ದು, ಅದರಡಿಯಲ್ಲಿ ಪ್ರತಿ ಗ್ರಾಮದ ಮನೆಗೆ ಗ್ರಾಮಲೆಕ್ಕಾಧಿಕಾರಿಗಳು ಭೇಟಿ ನೀಡಿ ಸ್ಥಳದಲ್ಲಿ ಪಿಂಚಣಿ ಮಂಜೂರ ಮಾಡುವ ಹೊಸ ಯೋಜನೆ ಜಾರಿ ಮಾಡಲಾಗಿದೆ.    ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ 66 ಸಂಧ್ಯಾ ಸುರಕ್ಷಾ, 114 ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, 55 ನಿರ್ಗತಿಕ ವಿಧವಾ ವೇತನ, 03 ಅಂಗವಿಕಲ ವೇತನ, 06 ಮನಸ್ವಿನಿ, ಒಟ್ಟು 244 ಫಲಾನುಭವಿಗಳಿಗೆ ಮಾಶಾಸನ ಮಂಜೂರಾತಿ ಪ್ರಮಾಣ ಪತ್ರ ಈ ದಿನ ವಿತರಿಸಲಾಗುತ್ತಿದೆ.  ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆಯಿಂದ 03 ಶ್ರವಣ ಸಾಧನ, 03 ವ್ಹೀಲ್ ಚೇರ್, 01 ವಾಟರ್ ಬೆಡ್, 04 ಕೃತಕ ಕಾಲುಗಳು ಹೀಗೆ ಒಟ್ಟು 11 ಜನ ಫಲಾನುಭವಿಗಳಿಗೆ ಸಾಧನ ಸಲಕರಣಗಳನ್ನು ಈ ದಿನ ವಿತರಿಸಲಾಗುತ್ತಿದೆ ಮತ್ತು ಆರೋಗ್ಯ ಇಲಾಖೆಯಿಂದ 12 ಜನ ಫಲಾನುಭವಿಗಳಿಗೆ ಕನ್ನಡಕ ವಿತರಣೆ ಹಾಗೂ ದಂತಭಾಗ್ಯ ಯೋಜನೆಯಡಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಾಮಿತ್ವ ಯೋಜನೆಯಡಿಯಲ್ಲಿ ಹುಬ್ಬಳ್ಳಿ ತಾಲೂಕಿನ 35 ಗ್ರಾಮಗಳು ಸ್ವಾಮಿತ್ವ ಯೋಜನೆಯಡಿಯಲ್ಲಿ ನೋಟಿಫಿಕೇಶನ್ ಆಗಿದ್ದು, 07 ಗ್ರಾಮಗಳ ಮಾರ್ಕಿಂಗ್ ಕಾರ್ಯ ಪೂರ್ಣಗೊಂಡಿದೆ ಹಾಗೂ 03 ಗ್ರಾಮಗಳ ಮಾರ್ಕಿಂಗ್ ಕೆಲಸ ಪ್ರಗತಿಯಲ್ಲಿದೆ.   ಕೃಷಿ ಇಲಾಖೆಯಿಂದ ಆಯ್ಕೆಗೊಂಡ 04 ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನು ಈ ದಿನ ವಿತರಿಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ ಆಯ್ಕೆಗೊಂಡ ಫಲಾನುಭವಿಗಳಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಟ್ರ್ಯಾಕ್ಟರ್ ಮತ್ತು ಪವರ್ ಟ್ರೇಲರ್ ಮಷಿನ್ ವಿತರಿಸಲಾಗುತ್ತಿದೆ.     ಧಾರವಾಡ ಜಿಲ್ಲೆಯಲ್ಲಿ 18 ಗ್ರಾಮಗಳ ಪೈಕಿ ಧಾರವಾಡ ತಾಲ್ಲೂಕು 4, ಕಲಘಟಗಿ ತಾಲ್ಲೂಕು 5, ಹುಬ್ಬಳ್ಳಿ ತಾಲ್ಲೂಕು 1 ಒಟ್ಟು 10 ಕಂದಾಯ ಗ್ರಾಮಗಳ ರಚನೆಗೆ ಸರ್ಕಾರದಿಂದ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಬಾಕಿ ಉಳಿದ 8 ಗ್ರಾಮಗಳ ಪೈಕಿ ಈಗಾಗಲೇ 5 ಗ್ರಾಮಗಳಿಗೆ 2-ಇ ಅಧಿಸೂಚನೆ ಹೊರಡಿಸಲಾಗಿದೆ.  2020ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಮೂಲಭೂತ ಸೌಕರ್ಯಗಳ ದುರಸ್ತಿಗಾಗಿ ಸರ್ಕಾರದ ವತಿಯಿಂದ 2195.55 ಕೋಟಿ ರೂ. ಬಿಡುಗಡೆಯಾಗಿದ್ದು,  ಈ ಅನುದಾನವನ್ನು ದುರಸ್ತಿ ಕಾಮಗಾರಿಗಳಿಗಾಗಿ ಇಲಾಖೆಗಳಿಗೆ ಮರು ಹಂಚಿಕೆ ಮಾಡಲಾಗಿದೆ ಅದರಲ್ಲಿ ಧಾರವಾಡ ಪಂಚಾಯತ ರಾಜ್ ಇಂಜಿನೀಯರಿಂಗ ವಿಭಾಗದಿಂದ ರಸ್ತೆ, ಸಿ.ಡಿ., ಶಾಲಾ ಕಟ್ಟಡ, ಕೆರೆ, ಅಂಗನವಾಡಿ ದುರಸ್ತಿ ಕಾಮಗಾರಿಗಳಿಗೆ 1446.162 ಲಕ್ಷ ರೂ.ಗಳು, ಧಾರವಾಡ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗಕ್ಕೆ 158 ಲಕ್ಷ ರೂ.ಗಳು,  ಧಾರವಾಡ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ 10.17 ಲಕ್ಷ ರೂ.ಗಳು ಧಾರವಾಡ, ರಾಯಾಪುರ, ನಿರ್ಮಿತಿ ಕೇಂದ್ರಕ್ಕೆ 402 ಲಕ್ಷ ರೂ.ಗಳು, ಒಟ್ಟು  2016.332 ಲಕ್ಷ ರೂ.ಗಳು ಬಿಡುಗಡೆಯಾಗಿದೆ.  2020-21ನೇ ಸಾಲಿನ ಅತಿವೃಷ್ಠಿಯಿಂದ ಹಾನಿಯಾದ ಮನೆಗಳ ನೆರೆ ಸಂತ್ರಸ್ಥರ ಪುನರ್ವಸತಿ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದ್ದು, ‘’ಎ’’ ವರ್ಗದ ಮನೆಗಳು 15 ಇದ್ದು ಅನುದಾನ 12 ಕೋಟಿ ರೂ.ಗಳು, ‘’ಬಿ’’ ವರ್ಗದ ಮನೆಗಳು 730 ಇದ್ದು ಅನುದಾನ 6.03 ಕೋಟಿ ರೂ.ಗಳು ಹಾಗೂ ‘’ಸಿ’’ ವರ್ಗದ ಮನೆಗಳು 2060 ಇದ್ದು 7.35 ಕೋಟಿ ರೂ.ಗಳು  ಹಾಗೂ ಸನ್ 2020-21 ಅಗಸ್ಟ್ ಮತ್ತು ಅಕ್ಟೋಬರನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾನಿಯಾದ ಬೆಳೆಗಳ ಒಟ್ಟು 97,104 ರೈತರಿಗೆ ಒಟ್ಟು ರೂ.8184.9 ರೂ.ಲಕ್ಷಗಳ ಇನ್‍ಪುಟ್ ಸಬ್ಸಿಡಿಯನ್ನು ಆರ್.ಟಿ.ಜಿ.ಎಸ್.ಮೂಲಕ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಛಬ್ಬಿ ಗ್ರಾಮದಲ್ಲಿ  ಮಾರ್ಚ್ 4 ರಿಂದ ಅರ್ಜಿ ಸ್ವೀಕರಿಸುವ ಕೇಂದ್ರ ಪ್ರಾರಂಭಿಸಲಾಗಿದೆ. ಈಗಾಗಲೇ ಕಂದಾಯ ಇಲಾಖೆಯ 48 ಅರ್ಜಿಗಳು, ಪಂಚಾಯತರಾಜ್ ಅಭಿವೃದ್ಧಿ ಇಲಾಖೆಯ 144 ಅರ್ಜಿಗಳು ಹಾಗೂ ಇತರೆ ಇಲಾಖೆಯ ಅರ್ಜಿಗಳು ಸೇರಿ ಒಟ್ಟು 266 ಅರ್ಜಿಗಳು ಸ್ವೀಕೃತವಾಗಿದ್ದು, ಸದರ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಲಾಗಿದ್ದು, ಸದರಿ ಇಲಾಖೆಯವರು ಈವರೆಗೆ 119 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ  ಕಂದಾಯ ಇಲಾಖೆಯ ಗ್ರಾಮ ವಾಸ್ತವ್ಯ ಕಾರ್ಯವು ತಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುಂದುವರಿದಿದು ರಾಜ್ಯದಲ್ಲಿ ಕಂದಾಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಿಕ್ಕಿನಲ್ಲಿ ಜನರ ಬಾಗಿಲಿಗೆ ಸರ್ಕಾರ ಬಂದು ಜನರ ಕಷ್ಟ ಪರಿಹರಿಸುವಲ್ಲಿ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಾಸ್ತಾವಿಕಾಗಿ ಮಾತನಾಡಿ, ಸದರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಒಟ್ಟು 700 ಅರ್ಜಿಗಳು ಸ್ವೀಕೃತವಾಗಿದ್ದು, 404 ಅರ್ಜಿಗಳನ್ನು ಈಗಾಗಲೇ ವಿವಿಧ ಇಲಾಖೆಯವರು ಇತ್ಯರ್ಥ ಪಡಿಸಿದ್ದು, ಇನ್ನೂ 296 ಅರ್ಜಿಗಳ ಕಾಲಮಿತಿ ಒಳಗೊಂಡಿರುವುದರಿಂದ ವಿಲೇವಾರಿ ಕುರಿತು ಕ್ರಮ ಜರುಗಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಪ್ರತಿ ಶುಕ್ರವಾರ ಧಾರವಾಡ ಜಿಲ್ಲೆಗೆ ಸಂಬಂಧಿಸಿದ 05 ರಿಂದ 07 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಕಂದಾಯ ಅದಾಲತ್, ಪಿಂಚಣಿ ಅದಾಲತ್, ಪೌತಿ ಖಾತೆ ಆಂದೋಲನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಕೆಲವೊಂದು ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಎಸ್.ಐ. ಚಿಕ್ಕಣಗೌಡ್ರ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ ರಂಜನ್,  ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಕ ಅಧಿಕಾರಿ ಡಾ:ಸುಶೀಲಾ ಬಿ., ಜಿಲ್ಲಾ ಪಂಚಾಯತ್ ಸದಸ್ಯರು, ಛಬ್ಬಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಮತ್ತು ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.ಧಾರವಾಡ ಉಪವಿಭಾಗಾಧಿಕಾರಿ ಡಾ: ಗೋಪಾಲಕೃಷ್ಣ ಬಿ. ಸ್ವಾಗತಿಸಿದರು. ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ್ ನಾಶಿ ವಂದಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ನಿರೂಪಿಸಿದರು.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement