
ತಂತ್ರಜ್ಞಾನ ಬೆಳೆದಂತೆ , ಮನುಷ್ಯನ ಕೈಯಲ್ಲಿ ಮೊಬೈಲ್ ಬಂದ ಮೇಲೆ ಗುಬ್ಬಚ್ಚಿಗಳ ಚಿಂವ್‌ಚಿಂವ್ ಮರೆಯಾಗುತ್ತಿದೆ.
ಗ್ರಾಮೀಣ ಭಾಗದ ಹಳೆ ಮನೆಗಳ ಮಾಳಿಗೆಯ ಸೂರಿನ ಅಸುಪಾಸಿನಲ್ಲಿ ಮತ್ತು ಗಿಡಮರಗಳಲ್ಲಿ ಗೂಡುಕಟ್ಟಿ ಚಿಲಿಪಿಲಿಗುಟ್ಟುತ್ತಿದ್ದ ಗುಬ್ಬಚ್ಚಿಗಳಿಂದು ಸೂಕ್ತ ನೆಲೆ ಇಲ್ಲದೆ ಅಳಿವಿನ ಅಂಚಿನಲ್ಲಿವೆ ಎಂದರೆ ತಪ್ಪಾಗಲಿಕ್ಕಿಲ್ಲ.
ಪಕ್ಷಿ ತಜ್ಞರ ಪ್ರಕಾರ ಅತಿಯಾದ ಮೊಬೈಲ್ ಸ್ಥಾವರಗಳಿಂದ ಹೊರಹೊಮ್ಮುತ್ತಿರುವ ತರಂಗಳಿಂದಲೂ ಗುಬ್ಬಚ್ಚಿಗಳ ಸಂತತಿಗೆ ಹಾನಿಯಾಗುತ್ತಿದೆ ಎಂಬುದು ತಿಳಿದು ಬಂದಿದೆ.ಎಲ್ಲಡೆ ಕಾಂಕ್ರೀಟ್ ಕಾಡು ಮತ್ತು ಝಗಝಗಿಸುವ ಬೆಳಕು ಗೂಡುಕಟ್ಟಲು ನೆಲೆಯೇ ಸಿಗದಂತೆ ಮಾಡಿದೆ. ಹಿಂದಿನ ದಿನಗಳಲ್ಲಿ ಗಿಡ ಮರಗಳಲ್ಲಿ ಹಕ್ಕಿಯ ಗೂಡುಗಳು ಕಾಣುತ್ತಿದ್ದವು. ಮುಂಜಾವಿನಲ್ಲಿ ಅವುಗಳ ಸ್ವರ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದವು.
ಗುಬ್ಬಚ್ಚಿ ಸಂತತಿ ಕ್ಷೀಣಿಸಲು ಕಾರಣ ಬೇಸಿಗೆ ದಿನಗಳಲ್ಲಿ ಅವುಗಳಿಗೆ ನೀರು-ಆಹಾರವೇ ಸಿಗುತ್ತಿಲ್ಲ. ಮೊದಲು ವರ್ಷವಿಡೀ ಮನೆ ಮುಂಭಾಗ ಧಾನ್ಯಗಳನ್ನು ಒಣಗಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಇದೀಗ ಹಳ್ಳಗಳಲ್ಲಿಯೂ ಪ್ಯಾಕೇಟ್ ಬಂದ ಬಳಿಕ ಗುಬ್ಬಿಗಳಿಗೆ ಆಹಾರವೇ ಸಿಗದಾಗಿದೆ.
ಹೊಲಗಳಲ್ಲೂ ಬೆಳೆ ಪದ್ಧತಿ ಬದಲಾಗಿದೆ. ಜೋಳ, ಕಡಲೆ, ಹೆಸರುಕಾಳು, ಸೂರ್ಯಕಾಂತಿ ಜಾಗವನ್ನು ಕಬ್ಬು ಮತ್ತು ವಾಣಿಜ್ಯ ಬೆಳೆಗಳು ಆಕ್ರಮಿಸುತ್ತಿವೆ.. ಹಸಿರುಮನೆ ನಿರ್ಮಾಣಗೊಳ್ಳುತ್ತಿವೆ. ಎಲ್ಲೂ ಸೂಕ್ತ ಆಹಾರ ಸಿಗದಿರುವುದು, ಅತಿಯಾದ ರಸಾಯನಿಕಗಳ ಬಳಕೆಯೂ ಸಹ ಗುಬ್ಬಚ್ಚಿಗಳ ಸಂತತಿ ಕ್ಷೀಣಿಸಿಲು ಪ್ರಮುಖಕಾರಣವಾಗಿವೆ ಎನ್ನುತ್ತಾರೆ ಪಕ್ಷಿ ಪ್ರೇಮಿಗಳು.
ವಿಶ್ವಗುಬ್ಬಚ್ಚಿ ದಿನಾಚರಣೆ:ಗುಬ್ಬಚ್ಚಿ ಸಂತತಿ ಉಳಿಸುವ ನಿಟ್ಟಿನಲ್ಲಿಜಾಗೃತಿ ಮೂಡಿಸಲು ಎನ್.ಎಫ್.ಎಸ್‌ನ ಸಂಸ್ಥಾಪಕ ಮೊಹ್ಮದ್ ದಿಲಾವರ್ (ನೇಚರ್ ಫಾರ್‌ಎವರ್ ಸೂಸೈಟಿ) ಫ್ರಾನ್ಸ್ ಎಕೊ-ಸಿನ್‌ಆಕ್ಷನ್ ಫೌಂಡೇಶನ್ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಗುಬ್ಬಚ್ಚಿ ಮತ್ತು ಇತರ ಪಕ್ಷಿ ಸಂಕುಲವನ್ನು ಸಂರಕ್ಷಿಸಲು ೨೦೧೦ ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಮಾ.೨೦ ರಂದು ವಿಶ್ವ ಗುಬ್ಬಚ್ಚಿ ದಿನಾಚರಣೆ ಪ್ರಾರಂಭವಾಯಿತು.
ಗುಬ್ಬಚ್ಚಿ ಸಂರಕ್ಷಣೆಗೆ ಮುಂದಾಗಿ:ಇತ್ತೀಚ್ಚೆಗೆ ಗುಬ್ಬಿಗಳ ಗೂಡುಕಟ್ಟಲು ಜಾಗ ಹುಡುಕುವ ಪರಿಸ್ಥಿತಿ ಇದೆ. ಗುಬ್ಬಿಗಳಿಗೆ ಗೂಡುಕಟ್ಟಲು ಮನೆಯ ಬಳಿ ಸ್ಥಳಗಳಿದ್ದರೆ ಅವಕಾಶ ಮಾಡಿಕೊಡಬಹದು. ಖಾಲಿ ಡಬ್ಬಿಗೆ ರಂಧ್ರ ಮಾಡಿ ಮನೆಯ ಹೊರಗೆ ಸೂಕ್ತ ಸ್ಥಳದಲ್ಲಿಟ್ಟರೆ ಸ್ವಲ್ಪ ದಿನಗಳಲ್ಲಿ ಅಲ್ಲಿ ಗುಬ್ಬಿಯೂ ಸೇರಿದಂತೆ ವಿವಿಧ ಹಕ್ಕಿಗಳು ಗೂಡುಕಟ್ಟುತ್ತವೆ. ಹಾಗೆ ಮನೆಯ ಕಾಂಪೌಂಡ್ ಮೇಲೆ ಒಂದಷ್ಟು ಅಕ್ಕಿ ಕಾಳು ಹಾಕಿದರೆ ಕೆಲ ದಿನಗಳಲ್ಲಿಯೇ ಮನೆಯಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಕೇಳಬಹುದು.
ಗುಬ್ಬಿಗಳ ರಕ್ಷಣೆಗೆ ಅನೇಕ ರಾಜ್ಯ ಸರ್ಕಾರಗಳು ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ೨೦೧೨ರಲ್ಲಿ ದೆಹಲಿ ಸರ್ಕಾರ ಗುಬ್ಬಿಯನ್ನು ರಾಜ್ಯ ಪಕ್ಷಿಯನ್ನಾಗಿಘೋಷಣೆ ಮಾಡಿದೆ. ಅದೇರೀತಿ ಬಿಹಾರ ರಾಜ್ಯವೂ ಗುಬ್ಬಿಯನ್ನು ರಾಜ್ಯ ಪಕ್ಷಿಯಾಗಿ ಘೋಷಣೆ ಮಾಡಿ ಗುಬ್ಬಿಗಳ ಸಂತತಿ ವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಅದರಂತೆ ಕರ್ನಾಟಕದಲ್ಲಿಯೂ ಗುಬ್ಬಿ ಸಂತತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಬೇಕಿದೆ. ಮಾನವನ ಜೀವನಕ್ರಮಕ್ಕೆ ಹತ್ತಿರವಾಗಿ ಹೊಂದಿಕೊಂಡಿದ್ದ ಗುಬ್ಬಚ್ಚಿಗಳ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ