ಬೆಳಗಾವಿ ಲೋಕಸಭಾ ಉಪ ಚುನಾವಣೆ: 18.07 ಲಕ್ಷ ಮತದಾರರು

ಬೆಳಗಾವಿ : ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಮಂಗಳವಾರ ಅಧಿಸೂಚನೆ ಪ್ರಕಟಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಮಾರ್ಚ್ 30 ಕಡೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.
ಲೋಕಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ನಾಮಪತ್ರಗಳ ಪರಿಶೀಲನೆ ಮಾರ್ಚ್ 31 ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಏಪ್ರಿಲ್ 3 ಕಡೆಯ ದಿನವಾಗಿದೆ. ಏಪ್ರಿಲ್ 17ರಂದು ಮತದಾನ ನಡೆಯಲಿದ್ದು, ಮೇ 2, 2021 ರಂದು ಮತ ಎಣಿಕೆ ನಡೆಯಲಿದೆ ಎಂದರು.
ಕ್ಷೇತ್ರದಲ್ಲಿ ಒಟ್ಟು 18.07 ಲಕ್ಷ ಮತದಾರರು:
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಂತಿಮ ಮತದಾರರ ಪಟ್ಟಿ(18-1-2021)ಯ ಪ್ರಕಾರ ಒಟ್ಟು 18,07,250 ಮತದಾರರಿದ್ದಾರೆ. 7925 ಸೇವಾ ಮತದಾರರಿದ್ದು, 12,290 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ.
.ಕ್ಷೇತ್ರದಲ್ಲಿ ಒಟ್ಟು 2566 ಮತಗಟ್ಟೆಗಳು:
ಲೋಕಸಭಾ ಉಪ ಚುನಾವಣೆಗೆ ಒಟ್ಟಾರೆ 2566 ಮತಗಟ್ಟೆಗಳನ್ನು  ಸ್ಥಾಪಿಸಲಾಗುವುದು. ಇದರಲ್ಲಿ 2064  ಮೂಲ ಮತಗಟ್ಟೆಗಳು ಹಾಗೂ ಒಂದು ಸಾವಿರಕ್ಕೂ ಅಧಿಕ ಮತದಾರರಿರುವ ಕಡೆಗಳಲ್ಲಿ ಹೆಚ್ಚುವರಿಯಾಗಿ 502 ಉಪ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು  ತಿಳಿಸಿದರು.
ಉಪ ಚುನಾವಣಾ ಕಾರ್ಯಕ್ಕಾಗಿ 2566 ಮತಗಟ್ಟೆಗಳಿಗೆ 11, 290 ಸಿಬ್ಬಂದಿ ನಿಯೋಜಿಸಲಾಗುತ್ತದೆ. ಅಗತ್ಯವಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಟ್ ಗಳು ಲಭ್ಯವಿದೆ ಎಂದರು.
ಸಹಾಯಕ ಚುನಾವಣಾಧಿಕಾರಿಗಳ ನೇಮಕ:
ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಮತ ಕ್ಷೇತ್ರಗಳಿಗೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 41,535 ಪೋಸ್ಟಲ್ ಬ್ಯಾಲೆಟ್ ಸಂಬಂಧಿಸಿದಂತೆ ನಿಗದಿತ ನಮೂನೆಯನ್ನು ಅರ್ಹ ಮತದಾರರ ಮನೆ ಮನೆಗೆ ತೆರಳಿ ನೀಡಲಾಗುತ್ತದೆ. ಒಂದು ಸಾವಿರಕ್ಕಿಂತ ಅಧಿಕ ಮತದಾರರು ಇರುವ ಕಡೆ ಉಪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮಾ.23 ರಿಂದ ನಾಮಪತ್ರ ಸ್ವೀಕಾರ:
ಮಾ. 23 ರಿಂದ ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ನಾಮಪತ್ರ ಸ್ವೀಕರಿಸಲಾಗುವುದು.
ನಿಯಂತ್ರಣ ಕೊಠಡಿ ಆರಂಭ:
ನೀತಿಸಂಹಿತೆ 16-3-2021 ರಿಂದ ಜಾರಿಗೆ ಬಂದಿರುತ್ತದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು‌ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮಾದರಿ ನೀತಿಸಂಹಿತೆ ಜಾರಿಯಲ್ಲಿರುತ್ತದೆ.
ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ಈಗಾಗಲೇ ದೂರು ಸ್ವೀಕಾರ ಕೇಂದ್ರ, ಕಂಟ್ರೋಲ್ ರೂಮ್ ಹಾಗೂ ಸಿವಿಜಿಲ್(24×7) ಕೇಂದ್ರಗಳನ್ನು ಆರಂಭಿಸಲಾಗಿದೆ.
* ಮಾದರಿ ನೀತಿ ಸಂಹಿತೆ: 0831-2406332* ದೂರು‌ ಸ್ವೀಕಾರ ಕೇಂದ್ರ: 0831-2406325* ಸಿ-ವಿಜಿಲ್ ಕೇಂದ್ರ: 0831-2406304
ಸಾರ್ವಜನಿಕರು ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ ಈ ಮೇಲ್ಕಂಡ ಕಂಟ್ರೋಲ್ ರೂಮ್ ಗಳಿಗೆ ದೂರು ಸಲ್ಲಿಸಬಹುದು.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 27 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಮಸ್ಟರಿಂಗ್‌ ಹಾಗೂ ಡಿಮಸ್ಟರಿಂಗ್ ಕೇಂದ್ರಗಳನ್ನು ಗುರುತಿಸಲಾಗಿದೆ. ಮತ ಎಣಿಕೆ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಸೋಂಕಿತ ಅರ್ಹ ಮತದಾರರಿಗೆ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪೋಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ) ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೋವಿಡ್ ಮಾರ್ಗಸೂಚಿ ಮತ್ತು ನೀತಿ ಸಂಹಿತೆ ಆಧರಿಸಿ ಹಬ್ಬಹರಿದಿನಗಳು, ಜಯಂತಿಗಳು, ಸಭೆ-ಸಮಾರಂಭಗಳಿಗೆ ಅನುಮತಿ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಯಾವುದೇ ಅಕ್ರಮ ರೀತಿಯ ಸಾಗಾಣಿಕೆ ಜೊತೆಗೆ ಕೋವಿಡ್ ತಪಾಸಣೆಯನ್ನು ಚೆಕ್ ಪೋಸ್ಟ್ ಗಳಲ್ಲಿ ಮಾಡಲಾಗುತ್ತದೆ.
ಅಕ್ರಮ ಮದ್ಯ ಮಾರಾಟ ಕುರಿತು ಜಾಗ್ರತೆ ವಹಿಸಲಾಗಿದೆ. ವೈನ್ ಶಾಪ್ ಗಳಿಗೆ ಈ ಕುರಿತು ಅಬಕಾರಿ ಇಲಾಖೆಯಿಂದ ಮಾಹಿತಿ ರವಾನಿಸಲಾಗಿದ್ದು, ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಲು ತಿಳಿಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement