ಸಿಡಿ ಪ್ರಕರಣ: ವಿಧಾನಸಭೆಯಲ್ಲಿ ಮುಂದುವರಿದ ಕಾಂಗ್ರೆಸ್‌ ಧರಣಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದು ಹಾಗೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ 6 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸದನದಲ್ಲಿ ಧರಣಿ ಮುಂದುವರೆಸಿದ್ದರಿಂದ ವಿಧಾನಸಭಾ ಕಲಾಪದಲ್ಲಿ ಮಂಗಳವಾರ ಕೂಡ ಕೋಲಾಹಲ ನಡೆಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಮೊದಲು ಸಭಾಧ್ಯಕ್ಷ ಕಾಗೇರಿ ಮಾಜಿ ಸಚಿವ ಬಿ.ಡಿ.ಬಸವರಾಜ್ ಅವರಿಗೆ ಸಂತಾಪ ನಿರ್ಣಯ ಮಂಡಿಸಿ ಬಳಿಕ ಪ್ರಶ್ನೋತ್ತರ ಅವಧಿ ಆರಂಭಿಸಲು ಮುಂದಾದರು.
ಈ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ ನಂತರ ಸರ್ಕಾರ ಏನು ಉತ್ತರ ಕೊಡುತ್ತದೆ ನೋಡೋಣ ಎಂದು ಸಭಾಧ್ಯಕ್ಷರು ಮನವಿ ಮಾಡಿದರು. ಇದಕ್ಕೆ ಒಪ್ಪದ ಕಾಂಗ್ರೆಸ್ ಸದಸ್ಯರು ಕೈಯಲ್ಲಿ ಸಿಡಿ ಹಿಡಿದು ಪ್ರತಿಭಟನೆ ನಡೆಸಿದರು.
ಸರ್ಕಾರದ ಉತ್ತರ ತೃಪ್ತಿ ತಂದಿಲ್ಲ. ಮೊದಲು ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಾಜಿ ಸಚಿವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಹಾಗೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ 6 ಮಂದಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಆಗ ಕಾಗೇರಿ ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ. ಕಲಾಪ ನಡೆಯಲು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಇದನ್ನು ಒಪ್ಪದ ಕಾಂಗ್ರೆಸ್ ಸದಸ್ಯರು ಮೊದಲು ಸಚಿವರು ರಾಜೀನಾಮೆ ಕೊಡಲಿ. ನಂತರದಲ್ಲಿ ಧರಣಿ ಹಿಂಪಡೆಯುವುದಾಗಿ ಪಟ್ಟು ಹಿಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ ಅವರು, ಸಿಡಿ ತಯಾರಕರು ಅವರದು ಸಿಡಿ ಫ್ಯಾಕ್ಟರಿಯೇ ಇದೆ. ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ ನಂತರ ಏನು ಉತ್ತರ ಕೊಡುತ್ತಾರೆ ಎಂದು ನೋಡೋಣ. ಏಕಾಏಕಿ ಬಾವಿಗಿಳಿದು ಪ್ರತಿಭಟಿಸುವುದು ಸರಿಯಲ್ಲ ಎಂದರು.
ಶಾಸಕ ರೇಣುಕಾಚಾರ್ಯ ಸಿಡಿ ತಯಾರಿಸಿರುವ ಕಾಂಗ್ರೆಸ್ಸಿಗರಿಗೆ ಧಿಕ್ಕಾರ ಎಂದು ಕೂಗಿದರು. ಸದನದಲ್ಲಿ ಗದ್ದಲ ಜೋರಾದಾಗ ಸರ್ಕಾರದ ನಿಲುವು ಏನು ಎಂದು ಸಭಾಧ್ಯಕ್ಷ ಕಾಗೇರಿ ಸಂಸದೀಯ ಖಾತೆ ಸಚಿವ ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು. ಈಗಾಗಲೇ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸುದೀರ್ಘ ಉತ್ತರ ಕೊಟ್ಟಿದೆ. ಪ್ರಕರಣದಲ್ಲಿ ನಾವು ಯಾರನ್ನು ರಕ್ಷಣೆ ಮಾಡುವ ಉದ್ದೇಶವಿಲ್ಲ. ಎಸ್‍ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ. ಇದು ಬಜೆಟ್ ಅಧಿವೇಶನವಾಗಿರುವುದರಿಂದ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಸರ್ಕಾರದ ಉತ್ತರ ಪಡೆಯುತ್ತಾರೆ. ಇದು ಅವರ ಹಕ್ಕು ಕೂಡ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಈ ಗದ್ದಲದ ನಡುವೆಯೇ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಮ್ಮ ಬೇಡಿಕೆಗಳು ನ್ಯಾಯುತವಾಗಿದೆ. ಎಸ್‌ಐಟಿ ತನಿಖೆ, ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನಡೆಯಬೇಕು. ಸಂತ್ರಸ್ತ ಹೆಣ್ಣು ಮಗಳಿಗೆ ರಕ್ಷಣೆ ಸಿಗಬೇಕು. ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಸಿ.ಡಿ. ಇದೆ ಎಂಬ ಭೀತಿಯಿಂದ ತೇಜೋವಧೆ ವರದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ೬ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಈ ಬೇಡಿಕೆ ಒಪ್ಪಿದರೆ ಧರಣಿ ಹಿಂಪಡೆದು ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿದರು.
ಸರ್ಕಾರ ಇದಕ್ಕೆ ಸ್ಪಂದಿಸಲಿಲ್ಲ. ಸದನದಲ್ಲಿ ಘೋಷಣೆ ಮತ್ತಷ್ಟು ತಾರಕಕ್ಕೇರಿತು. ಸಭಾಧ್ಯಕ್ಷರು ಸದನವನ್ನು ಮತ್ತೆ ಮಧ್ಯಾಹ್ನ ೩ ಗಂಟೆಗೆ ಮುಂದೂಡಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement