ಸಿಡಿ ಪ್ರಕರಣ:ಕಾಂಗ್ರೆಸ್ ನಿಂದ ಪಾಠ ಕಲಿಯಬೇಕಿಲ್ಲ

ಬೆಂಗಳೂರು:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿನ ಸತ್ಯಾಸತ್ಯತೆ ಹೊರ ಬರುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ಕಾಂಗ್ರೆಸ್ಸಿಗೆ ಬೇಕಾಗಿಲ್ಲ. ಹೀಗಾಗಿ  ಸಿಡಿ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದವರು ಸಿಡಿ ವಿಚಾರವನ್ನು ಮುಂದಿಟ್ಟುಕೊಂಡು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರ ನಡವಳಿಕೆಯನ್ನು  ಬೊಮ್ಮಾಯಿ ಕಟುವಾಗಿ ಟೀಕಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಸತ್ಯ ಹರಿಶ್ಚಂದ್ರರೇನಲ್ಲ. ೨೦೧೬ ರಲ್ಲಿ ಅಂದಿನ ಸಚಿವ ಎಚ್‌.ವೈ. ಮೇಟಿ ಪ್ರಕರಣದಲ್ಲಿ ಏನಾಯ್ತು? ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಮಾಧ್ಯಮದಲ್ಲಿ ಪ್ರಸಾರವಾಗಿರುವ ಸಿಡಿಯ ಸತ್ಯಾಸತ್ಯತೆ ಅರಿಯಲು ಮೇಟಿ ಪ್ರಕರಣವನ್ನು ಸಿಐಡಿಗೆ ವಹಿಸಲಾಯಿತು. ವಿಚಾರಣೆ ಮಾಡಿ ವರದಿ ಕೊಡಿ ಎಂದು ಸೂಚಿಸಲಾಗಿತ್ತು. ಆಗ ಮೇಟಿ ಪ್ರಕರಣದ ಕುರಿತು ಯಾವ ಪೊಲೀಸ್ ಠಾಣೆಯಲ್ಲಿಯೂ ಎಫ್ ಐ ಆರ್ ದಾಖಲಾಗಿರಲಿಲ್ಲ. ವಿಚಾರಣೆಗೆ ಟರ್ಮ್ಸ್ ಮತ್ತು ರೆಫರೆನ್ಸ್ ಇರಲಿಲ್ಲ. ಆಗ ರಾಮಲಿಂಗಾರೆಡ್ಡಿ ಅವರು ಗೃಹ ಸಚಿವರಾಗಿದ್ದರು. ಆಗ ಅವರೂ ಇದನ್ನೇ ಮಾಡಿದ್ದಾರೆ. ಆದರೆ ಈಗ ಸಿಡಿ ಪ್ರಕರಣದಲ್ಲಿ ಎಫ್ ಐ ಆರ್ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದವರು ಸತ್ಯ ಹರಿಶ್ಚಂದ್ರರಲ್ಲ‌ ಎಂದು ದಾಖಲೆ ಸಮೇತ ಸದನದ ಗಮನ ಸೆಳೆದರು.
ಆಗ ಮೇಟಿ ಪ್ರಕರಣದಲ್ಲಿ ಒಬ್ಬ ಅಧಿಕಾರಿಯನ್ನೇ  ತನಿಖಾಧಿಕಾರಿ ಮತ್ತು ವಿಚಾರಣಾಗೆ ನೇಮಿಸಲಾಗಿತ್ತು. ಆದರೆ ನಾವು ಎಸ್ ಐ ಟಿ ಯನ್ನು ರಚಿಸಿದ್ದೇವೆ. ವಿಚಾರಣೆಗಿಂತ ಮೊದಲೇ ಪ್ರಕರಣದಲ್ಲಿ ಮೇಟಿ ಅವರಿಗೆ ಕ್ಲಿನ್ ಚಿಟ್ ನೀಡಲಾಗಿದೆ‌ ಎಂದು ಆ ಸಂದರ್ಭದಲ್ಲಿ ಹೊರಡಿಸಲಾದ ಆದೇಶ ಪ್ರತಿಗಳನ್ನು ಮಾಧ್ಯಮಗಳಿಗೆ ಪ್ರದರ್ಶನ ಮಾಡಿದರು.
ಆಗ ಆ ಸಿಡಿಯಲ್ಲಿ ಇದ್ದ ಮಹಿಳೆಯ ಗತಿ ಏನಾಯಿತು. ಆಗ ಇದೇ ಕಾಂಗ್ರೆಸ್ ಶಾಸಕರು ಮತ್ತು ಸರ್ಕಾರ ಆ ಮಹಿಳೆಯ ವಿರುದ್ಧ ನಿಂತಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ನಾವು ಪಾಠ ಕಲಿಯಬೇಕಿಲ್ಲ. ಜನರೇ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಧಿಕ್ಕಾರ ಹಾಕಲಿದ್ದಾರೆ ಎಂದು ಬೊಮ್ಮಾಯಿ  ಧರಣಿ ನಿರತ ಕಾಂಗ್ರೆಸ್ ಸದಸ್ಯರನ್ನು ಟೀಕಿಸಿದರು.

ಪ್ರಮುಖ ಸುದ್ದಿ :-   ಅತ್ಯಾಚಾರ ಪ್ರಕರಣ: ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರುವಂತೆ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement