ಹುಬ್ಬಳ್ಳಿ-ಧಾರವಾಡ ಮಾಜಿ ಮಹಾಪೌರ ಸುಧೀರ ಸರಾಫ ವಿಧಿವಶ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಭಾರತೀಯ ಜನತಾ ಪಕ್ಷದ ಮುಖಂಡರಾದ ಸುಧೀರ ಸರಾಫ (೫೪) ಗುರುವಾರ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಲೆಕ್ಟ್ರಿಕಲ್‌ ಎಂಜಿನೀಯರಿಂಗ್‌ ಡಿಪ್ಲೋಮಾ ಮುಗಿಸಿದ್ದ ಸುಧೀರ ಸರಾಫ, ೧೯೮೮ರಲ್ಲಿ ಬಿಜೆಪಿ ಸೇರಿದ್ದರು. ಮುಂದೆ ಬಿಜೆಪಿ ಹುಬ್ಬಳ್ಳಿ-ಧಾರವಾಡ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅಲ್ಲದೇ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿಯೂ ಕೆಲಸ ಮಾಡಿದರು. ೨೦೧೩ರಲ್ಲಿ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿದ್ದ ಸುಧೀರ ಸರಾಫ ಆಡಳಿತ ಪಕ್ಷದ ಮುಖಂಡರಾಗಿ ಕೆಲಸ ಮಾಡಿದರು. ೨೦೧೭ರಲ್ಲಿ ಪಾಲಿಕೆಯ ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಚೇರಮನ್‌ ಆಗಿದ್ದರಲ್ಲದೇ ೨೦೧೮ರಲ್ಲಿ ಮಹಾನಗರದ ಮಹಾಪೌರರಾಗಿ ನೇಮಕಗೊಂಡರು. ಹಲವಾರು ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದರು. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧೀರ್‌ ಸರಾಫ ಗುರುವಾರ ನಿಧನರಾಗಿದ್ದಾರೆ.

 ಮನೆಯ ಒಬ್ಬ ಸದಸ್ಯನನ್ನು ಕಳೆದುಕೊಂಡಂತಾಗಿದೆ: ಮನಸ್ಸು ಭಾರವಾಗಿದೆ. ನನ್ನ ಮನೆಯ ಒಬ್ಬ ಸದಸ್ಯನನ್ನು ಕಳೆದುಕೊಡಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಜಿ ಮಹಾಪೌರ ಸುಧೀರ್‌ ಸರಾಫ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸದಾ ಲವಲವಿಕೆಯಿಂದ ಇರುತ್ತಿದ್ದ ಸುಧೀರ್ ಸರಾಫ್ ಗುಣಮುಖರಾಗಿ ಹೊರ ಬರುತ್ತಾರೆಂಬ ಭಾವನೆಗಳ ಮಧ್ಯೆ ಘಟಿಸಿರುವ ಈ ಘಟನೆ ಎಲ್ಲರನ್ನೂ ಶೋಕದಲ್ಲಿ ಮುಳುಗಿಸಿದೆ.
ಪಾಲಿಕೆ ಸದಸ್ಯರಾಗಿ ಆ ನಂತರ ಮೇಯರ್ ಹುದ್ದೆ ಅಲಂಕರಿಸಿ ಮಾಡಿದ ಕೆಲಸ ಅಪಾರ. ಅವೆಲ್ಲವೂ ಈಗ ನೆನಪು ಮಾತ್ರ ಎಂದಿರುವ ಜೋಶಿ, ಸ್ನೇಹಜೀವಿ, ಗೆಳೆಯರು ತೊಂದರೆಗೆ ಸಿಲುಕಿದ ವಿಚಾರ ತಿಳಿದರೆ ತಕ್ಷಣ ನೆರವಿಗೆ ಧಾವಿಸಿ , ಅಗತ್ಯ ಸವಲತ್ತುಗಳನ್ನು ಒದಗಿಸುತ್ತಿದ್ದ ಅಪರೂಪದ ವ್ಯಕ್ತಿ. ಸರಾಫ್ ನಮ್ಮೊಂದಿಗಿಲ್ಲ ಎಂಬ ಸುದ್ಧಿ ನಂಬಲಸಾಧ್ಯ. ಬದುಕಿ ಬರಬಹುದು’ ಎಂದು ಎಲ್ಲೋ ಒಂದು ಕಡೆ ಮಿನುಗುತ್ತಿದ್ದ ಆಸೆ ಕೊನೆಗೂ ಹುಸಿಯಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದೂ ಜೋಶಿ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಶಾಸಕ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

3 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement