ಸಿಡಿ ಪ್ರಕರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ:ಎಚ್‌ಡಿಕೆ

ಬೆಂಗಳೂರು: ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿ.ಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ. ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೆಸರು ಕೇಳಿಬಂದಿದ್ದು, ಈಗ ‘ಹನಿಟ್ರ್ಯಾಪ್‌’ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾತ್ರಿ ಒಂದು ಆಡಿಯೊ ಬಿಡುಗಡೆಯಾಗುವುದು, ಬೆಳಗ್ಗೆ ಅದಕ್ಕೊಂದು ಸ್ಪಷ್ಟನೆಯ ವಿಡಿಯೊ ಬಿಡುಗಡೆಯಾಗುವುದು. ಇವೆಲ್ಲವನ್ನೂ ಗಮನಿಸುತ್ತಿದ್ದರೆ ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ನೆಪದಲ್ಲಿ, ಆಕೆಯನ್ನು ಮುಂದಿಟ್ಟುಕೊಂಡು ಯಾರೋ ಆಟವಾಡುತ್ತಿರುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ದಿಟ್ಟತನ ಮೆರೆಯಬೇಕು. ಯಾವುದೇ ರಾಜಕೀಯ ಒತ್ತಡಗಳನ್ನೂ ಲೆಕ್ಕಿಸದೇ ತನಿಖೆ ನಡೆಸಿ ಅಸಲಿ ಸತ್ಯ ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು.
ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪ್‌ ಆಗಿದೆಯೋ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬುದನ್ನು ಲೆಕ್ಕಿಸದೇ ಅಸಲಿ ಸಂಗತಿಯನ್ನು ಪೊಲೀಸರು ಹೊರತರಬೇಕು. ರಾಜ್ಯದ ಪೊಲೀಸರ ಕರ್ತವ್ಯ ನಿಷ್ಠೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರಿದೆ. ಅದರ ಪ್ರದರ್ಶನಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
ಲೈಂಗಿಕ ಪ್ರಕರಣವೊಂದರ ವರದಿಗಳು ನಿತ್ಯ ಪ್ರಕಟವಾಗುತ್ತಿದ್ದರೆ, ಅದರಿಂದ ಕುಟುಂಬಗಳು ಮತ್ತು ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ನಾವು ಚಿಂತಿಸಬೇಕಿದೆ. ಇದಕ್ಕೆ ಸೂಕ್ತ ತನಿಖೆಯೊಂದೇ ದಾರಿ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement