ನನಗೆ ಪ್ರತಿಭಟನೆ ಸ್ವಾಗತ ಕೋರಿದವರಿಗೆ ಅಭಿನಂದನೆಗಳು; ಡಿಕೆಶಿ

ಬೆಳಗಾವಿ: ಪ್ರತಿಭಟನೆ ಮೂಲಕ ನನಗೆ ಸ್ವಾಗತ ಮಾಡುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಅವರ ಸ್ವಾಗತ, ಪ್ರೀತಿ ವಿಶ್ವಾಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸ್ವಾಗತವೇ ನಮಗೆ ದೊಡ್ಡ ಶಕ್ತಿಯಾಗುತ್ತದೆ. ಅವರು ಎಂತೆಂಥಾ ಘನಕಾರ್ಯಕ್ಕೆ ಈ ಸ್ವಾಗತ ಮಾಡುತ್ತಿದ್ದಾರೆ ಗೊತ್ತಿದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿವಕುಮಾರ್ ಸುದ್ದಿಗಾರರ ಜೊತೆ ಮಾತನಾಡಿ, ಬೆಳಗಾವಿಯಲ್ಲಿ ನನ್ನ ಬೆಂಬಲಿಗರ ಕಾರಿನ ಮೇಲೆ ಚಪ್ಪಲಿ, ಕಲ್ಲು ತೂರಾಟ, ಗಲಾಟೆ ಹಾಗೂ ಅದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ , ‘ಅವರು ಜವಾಬ್ದಾರಿಯುತ ಗೃಹ ಸಚಿವರಾಗಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ಸಹಜ. ನಮಗೆ ಹೂವಿನ ಹಾರ ಹಾಕುವವರು ಇರ್ತಾರೆ, ಧಿಕ್ಕಾರ ಹಾಕುವವರೂ ಇರ್ತಾರೆ, ಕಲ್ಲು ಹೊಡೆಯುವವರೂ ಇರ್ತಾರೆ. ಹಿಂದೆ ಮೊಟ್ಟೆ ಎಸೆಯುತ್ತಿದ್ದರು. ಹಾಗೆಯೇ ಹೂವು- ಸೇಬಿನ ಹಾರವನ್ನೂ ಹಾಕ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಈಗ ಕೆಲವರು ದೊಡ್ಡ, ದೊಡ್ಡ ಸಾಧನೆ ಮಾಡಿದ್ದಾರಲ್ಲಾ ಅದಕ್ಕೆ ಹೀಗೆಲ್ಲಾ ಮಾಡ್ತಾರೆ. ಏನಾಯ್ತೋ, ಬಿಟ್ಟಿತೊ ನಾನು ಎಲ್ಲವನ್ನೂ ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳುತ್ತೇನೆ. ಕ್ಷೇತ್ರದ, ರಾಜ್ಯದ ಮಹಾಜನತೆ ನೋಡುತ್ತಿದ್ದಾರೆ. ಚುನಾವಣೆಯನ್ನು ಶಾಂತ ರೀತಿಯಲ್ಲಿ ನಾವು ನಡೆಸುತ್ತೇವೆ. ಆದರೆ ಬಿಜೆಪಿಯವರು ಎಂತೆಂತಹಾ ಮುತ್ತು ರತ್ನಗಳನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ಜನ ನೋಡಿದ್ದಾರೆ ಎಂದರು.
ಬೆಳಗಾವಿ ಉಪಚುನಾವಣೆ ಬರಬಾರದಿತ್ತು. ಆಕಸ್ಮಿಕವಾಗಿ ಬಂದಿದೆ. ಸುರೇಶ್ ಅಂಗಡಿ ಅವರ ಅಕಾಲಿಕ ಮರಣದಿಂದ ಈ ಚುನಾವಣೆ ತಂದಿದೆ. ಚುನಾವಣೆ ಬಹಳ ನಿಧಾನವಾಗಿದೆ. ಕಾಂಗ್ರೆಸ್ ಇಡೀ ಕ್ಷೇತ್ರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಅಮಯ್ಯ, ನಾನು, ಎಂ.ಬಿ ಪಾಟೀಲರು, ರಾಮಲಿಂಗಾ ರೆಡ್ಡಿ ಅವರು, ದೇಶಪಾಂಡೆ ಸೇರಿದಂತೆ ಈ ಭಾಗದ ಎಲ್ಲ ನಾಯಕರು ಸೇರಿ ಒಬ್ಬರೇ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೆಸರು ಸೂಚಿಸಿದ್ದೇವೆ. ನಾಳೆ ೧೧ ಗಂಟೆಗೆ ನಾಮ ಪತ್ರ ಸಲ್ಲಿಸುತ್ತಾರೆ. ಅದಕ್ಕೆ ನಾವು ಬಂದಿದ್ದೇವೆ. ಉತ್ತಮ ಜನ ಬೆಂಬಲ, ಜನರ ಸೇವೆ, ಯುವಕರ ಬಗ್ಗೆ ಕಾಳಜಿ ಇರುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್‌ ಕೊಟ್ಟಿದೆ. ಸತೀಶ್ ಅವರನ್ನು ಸಂಸತ್ತಿಗೆ ಕಳುಹಿಸಬೇಕು ಎಂದು ಬೆಳಗಾವಿಯ ಜನ ಬೆಂಬಲವಾಗಿ ನಿಂತಿದ್ದಾರೆ. ನಾವೆಲ್ಲರೂ ಸೇರಿ ಅವರಿಗೆ ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಿಂದ 25 ಮಂದಿ ಬಿಜೆಪಿಯವರು ಸಂಸತ್ತಿಗೆ ಹೋಗಿದ್ದರೂ ಒಂದು ದಿನವೂ ಅವರು ರಾಜ್ಯದ ಪರ ಧ್ವನಿ ಎತ್ತಿಲ್ಲ. ಹೀಗಾಗಿ ರಾಜ್ಯದಿಂದ ಕಾಂಗ್ರೆಸ್ ನ ಎರಡನೇ ಸಂಸದರಾಗಿ ಸತೀಶ್ ಆಯ್ಕೆಯಾಗುತ್ತಾರೆ ಎಂಬ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಸರ್ಕಾರದ ವೈಫಲ್ಯವೇ ಕಾಂಗ್ರೆಸ್ ಯಶಸ್ಸು:ಬಿಜೆಪಿ ಸರ್ಕಾರದ ವೈಫಲ್ಯವೇ ಕಾಂಗ್ರೆಸ್ ಪಕ್ಷದ ಯಶಸ್ಸಾಗುತ್ತದೆ. ನುಡಿದಂತೆ ನಡೆಯಲು ಬಿಜೆಪಿಗೆ ಆಗಲಿಲ್ಲ. ಕೊರೊನಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆಯಲಿಲ್ಲ. 2 ಎಲ್ಲ ವರ್ಗದ ಜನರಿಗೆ ಒಂದು ತಿಂಗಳು 5 ಸಾವಿರ ಕೊಡುವುದಾಗಿ ಹೇಳಿದ್ದರು, ಅದನ್ನೂ ಕೊಟ್ಟಿಲ್ಲ. ಚಾಲಕರು, ರೈತರು, ಸವಿತಾ ಸಮಾಜ, ನೇಯ್ಗೆಯವರಿಗೆ, ಬಟ್ಟೆ ಹೊಲಿಯುವವರಿಗೆ ಯಾರಿಗೂ ಹಣ ನೀಡಲಿಲ್ಲ ಎಂದು ಟೀಕಿಸಿದರು.
ಜನರೇ ಈ ಸಂದರ್ಭದಲ್ಲಿ ರೊಚ್ಚಿಗೆದ್ದು ತೀರ್ಮಾನ ಮಾಡಿದ್ದಾರೆ. ಯುವಕರು ಉದ್ಯೋಗ ಕೇಳಿದರೆ ಪಕೋಡಾ ಮಾರು ಎನ್ನುತ್ತಾರೆ. ಅಡುಗೆ ಅನಿಲ ದರ ಹೆಚ್ಚಳದಿಂದ ಮಹಿಳೆಯರು ಸಂಕಷ್ಟ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸುತ್ತಿದ್ದಾರೆ. ಇದಕ್ಕಿಂತ ಬೇರೆ ನೋವು ಏನು ಬೇಕು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

ಹೇಳಿಕೆ ಬಗ್ಗೆ ತನಿಖೆ ನಡೆಯಲಿ: ಇದಕ್ಕೂ ಮುನ್ನ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್, ‘ಯುವತಿ ಪೋಷಕರು ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಯುವತಿಯೂ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ಹೇಳಿದ ತಕ್ಷಣ ಅದೇ ನಿಜವಾಗುತ್ತಾ? ತನಿಖೆ ಇಲ್ಲವೇ? ನಿಮ್ಮನ್ನು ನಾನು ಕೊಲೆಗಾರ ಎಂದಾಕ್ಷಣ ನೀವು ಕೊಲೆಗಾರ ಆಗುತ್ತೀರಾ? ತನಿಖೆ ಆಗಲಿ. ಪೋಷಕರ ಕೈಯಲ್ಲಿ ಹೇಳಿಕೆ ಕೊಡಿಸ್ತಿದ್ದಾರೆ ಎಂಬ ಬಗ್ಗೆ ನಾನ್ಯಾಕೆ ಹೇಳಲಿ. ಎಲ್ಲ ಮಾಧ್ಯಮದವರೇ ಹೇಳುತ್ತಿದ್ದಾರಲ್ಲಾ? ವಿಜಯಪುರದಲ್ಲಿದ್ದವರು ಹೇಗೆ ಬೆಳಗಾವಿಗೆ ಬಂದು ದೂರು ಕೊಟ್ಟರು. ಬೆಳಗಾವಿಯಲ್ಲಿ ಅವರಿಗೆ ಯಾರು ಆಶ್ರಯ ಕೊಟ್ಟರು. ನಂತರ ಅವರು ಹೇಗೆ ಬೆಂಗಳೂರಿಗೆ ಬಂದರು ಎಂದು ನೀವೇ ತನಿಖೆ ಮಾಡಿ ಎಂದ ಅವರು ಅವಾಚ್ಯ ಪದ ಬಳಕೆ ಬಗ್ಗೆ ನಾನ್ಯಾಕೆ ಮಾನಹಾನಿ ಪ್ರಕರಣ ದಾಖಲಿಸಲಿ ಎಂದು ಹೇಳಿದರು.
ನನಗೆ ಯಾವ ಭದ್ರತೆಯೂ ಬೇಕಿಲ್ಲ. ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ನಾವೇನೂ ಅಂತಹ ಕೆಲಸ ಮಾಡಿಲ್ಲ, ನಮಗೆ ಭದ್ರತೆ ಬೇಡಾ ಎಂದು ಹೇಳಿ. ನನ್ನ ವಿರುದ್ಧ ಪ್ರತಿಭಟನೆ ಮಾಡಬೇಕು, ಮಾಡಲಿ. ಅದೇ ನಮಗೆ ದೊಡ್ಡ ಶಕ್ತಿ. ಭಾರೀ ಘನಕಾರ್ಯ ಮಾಡಿದ್ದೀವಿ ಎಂದು ಪ್ರತಿಭಟನೆ ಮಾಡುತ್ತಿದ್ದಾರಾ? ಮಾಡಲಿ ಬಿಡಿ, ಒಳ್ಳೆಯದು. ಸಂತ್ರಸ್ತ ಯುವತಿ ವಿಚಾರದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಏನೇನೋ ಮಾಡುತ್ತಿದ್ದಾರೆ, ಯಾರ್ಯಾರನ್ನು ಎಲ್ಲಿಂದಲೋ ಕರೆದುಕೊಂಡು ಬಂದು ಏನೇನು ಹೇಳಿಕೆ ಕೊಡಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇರಲಿ, ಪೊಲೀಸರು ತಮ್ಮ ಗೌರವ ಕಾಪಾಡಿಕೊಳ್ಳಲಿ ಎಂದು ನಾನು ಮನವಿ ಮಾಡುತ್ತೇನೆ. ಸದ್ಯಕ್ಕೆ ಚುನಾವಣೆಗಾಗಿ ಪ್ರವಾಸ ಮಾಡುತ್ತಿದ್ದು, ಎಲ್ಲರೂ ಸೇರಿ ಚುನಾವಣೆ ಮಾಡುತ್ತೇವೆ ಎಂದರು.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement