ಸಿಡಿ ಪ್ರಕರಣ; ಯುವತಿ ಬಂದು ದೂರು ನೀಡದೆ ಯಾರನ್ನೇ ಆದರೂ ಬಂಧಿಸಲು ಸಾಧ್ಯವೇ?:ಸಚಿವ ಜೋಶಿ

ಬೆಂಗಳೂರು: ಮಾಜಿ ಸಚಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಪೊಲೀಸರ ತನಿಖೆಗೆ ಸಹಕರಿಸುವುದು ಎಲ್ಲರ ಕರ್ತವ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕು ಯಾರನ್ನು ಬಿಡಬೇಕು ಎಂಬುದು ಎಸ್‌ಐಟಿಗೆ ಬಿಟ್ಟ ವಿಚಾರ. ಎಸ್‌ಐಟಿಗೆ ತನಿಖೆ ಮಾಡಲು ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಗೃಹ ಮಂತ್ರಿಗಳ ಜೊತೆ ಈ ಕುರಿತು ಚರ್ಚೆ ಮಾಡಿದ್ದೇನೆ, ಈ ತರಹದ ವಿಷಯಗಳಿಗೆ ಪೊಲೀಸರಿಗೆ ತನಿಖೆಗೆ ಸಹಕಾರ ಕೊಡುವುದು ಎಲ್ಲರ ಕರ್ತವ್ಯ. ತಪ್ಪಿತಸ್ಥರು ಯಾರೇ ಇರಲಿ, ಅವರಿಗೆ ಶಿಕ್ಷೆಯಾಗಲಿ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದವರು ಬಂದು ದೂರು ನೀಡುವವರೆಗೆ ಯಾರನ್ನಾದರೂ ಬಂಧಿಸಲು ಸಾಧ್ಯವೇ ಎಂದ ಅವರು, ಸಂತ್ರಸ್ತೆ ಬಂದು ದೂರು ನೀಡುವವರೆಗೆ ಬಂಧಿಸಲು ಆಗುವುದಿಲ್ಲ. ಇದರಲ್ಲಿ ಡಿ.ಕೆ.ಶಿವಕುಮಾರ್ ಹೆಸರೂ ತಳುಕು ಹಾಕಿಕೊಂಡಿದೆ. ಆದರೆ ಎಸ್‌ಐಟಿ ಯಾರನ್ನೂ ಬಂಧಿಸಿಲ್ಲ, ವಿಚಾರಣೆ ಮಾಡುತ್ತಿದೆ. ತನಿಖೆಗೂ ಮೊದಲೇ ಬಂಧಿಸಲು ಒತ್ತಾಯಿಸುವುದು ಸರಿಯಲ್ಲ. ಯುವತಿ ದೂರು ನೀಡಿದರೆ ಸರಿಯಾಗಿ ತನಿಖೆಯಾಗುತ್ತದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ದಾಳಿ ಮಾಡಿದ್ದು ಸರಿಯಲ್ಲ. ಯಾರೇ ಆಗಲಿ ಹಲ್ಲೆಗೆ ಮುಂದಾಗುವುದು ಸರಿಯಲ್ಲ. ಈ ರೀತಿ ವರ್ತನೆಯನ್ನು ಬಿಜೆಪಿ ಹಾಗೂ ಸರ್ಕಾರ ಒಪ್ಪುವುದಿಲ್ಲ. ನಿನ್ನೆ ಈ ಘಟನೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಎಲ್ಲರಿಗೂ ವಿನಂತಿ ಮಾಡುತ್ತೇನೆ ಬಿಜೆಪಿ ಕಾರ್ಯಕರ್ತರಾಗಲಿ, ಕಾಂಗ್ರೆಸ್ ಕಾರ್ಯಕರ್ತರಾಗಲಿ ಈ ರೀತಿ ಮಾಡಬಾರದು. ಉಪಚುನಾವಣೆಯೂ ನಡೆಯುತ್ತಿದೆ. ಇಂಥದ್ದನ್ನು ಮಾಡಬಾರದು ಎಂದರು.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement